ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ
ಜಗತ್ತಿನ ಪ್ರಮುಖ ಭಾಷೆಗಳ ಪೈಕಿ ಒಂದಾಗಿದೆ ಅರಬಿಕ್ ಭಾಷೆ.ಅರಬಿ ಭಾಷೆಯಲ್ಲಿ ಧಾರಾಳ ಸಾಹಿತ್ಯಗಳು, ರಚನೆಗಳು,ಕವಿತೆಗಳಿವೆ. ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ವೈಜ್ಞಾನಿಕ, ವೈದ್ಯಕೀಯ ರಂಗದಲ್ಲಿ ಅರಬಿ ಭಾಷೆಯೂ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದೆ. ಪುರಾತನ ಭಾಷೆಯಾದ ಅರಬಿ ಭಾಷೆಯು ಖುರ್‌ಆನ್ ಅವತೀರ್ಣ ಗೊಂಡ ಬಳಿಕ ಖುರ್‌ಆನ್ ಭಾಷೆಯಾಗಿ ಜಗತ್ತಿನಲ್ಲಿ ಗುರುತಿಸಲ್ಪಟ್ಟಿತು.ಮುಸ್ಲಿಮರ ಆರಾಧನಾ ಕ್ರಮಗಳು ಅರಬಿ ಭಾಷೆಯಲ್ಲಾದ ಕಾರಣ ಅರಬಿಗಳು ಮುಸ್ಲಿಮರು ಎಂಬ ಭಾವನೆ ಬೆಳೆದು ಬಂತು.ಮುಸ್ಲಿಮೇತರರು ಕೂಡ ಅರಣ ಭಾಷೆಯಲ್ಲಿ ಪಾಂಡಿತ್ಯ ಹೊಂದಿದವರನ್ನು ಇತಿಹಾಸ ಪುಟದಲ್ಲಿ ಕಾಣಬಹುದು. ಅವರು ಬರೆದ ಧಾರಾಳ ಗ್ರಂಥ ಗಳು ಈಗಲೂ ಲಭ್ಯವಿದೆ.ಅರಬಿ ಭಾಷೆಗೆ ಪ್ರಾಚೀನ ಕಾಲದಿಂದಲೂ ಲಿಪಿ ಇದೆ. ಇಂದು ನಾವು ಕಾಣುವ ಅರಬಿ ಲಿಪಿ ಪರಿಷ್ಕೃತ ಲಿಪಿಯಾಗಿದೆ. ಪ್ರಾಚೀನ ಅರಬಿ ಲಿಪಿಯೂ ಅರಬಿ ಪಾಂಡಿತ್ಯ ಇರುವ ವಿದ್ವಾನ್‌ಗಳಿಗಲ್ಲದೆ ಓದಲು ಸಾಧ್ಯವಿರಲಿಲ್ಲ. ಅರಬಿ ಲಿಪಿಯನ್ನು ವಿವಿಧ ಘಟ್ಟದಲ್ಲಿ ಮೂರು ಬಾರಿಗೆ ಪರಿಷ್ಠರಣೆಗೆ ಒಳಪಡಿಸಿದ ಬಳಿಕ ಇಂದು ಕಾಣುವ ಅರಬಿ ಲಿಪಿಯೂ ಜಾರಿಗೆ ಬಂತು. ಇಂದು ಚಾಲ್ತಿಯಲ್ಲಿರುವ ಅರಬಿ ಲಿಪಿಯಲ್ಲಿ ಸ್ವರಗಳೊಂದಿಗೆ ಚುಕ್ಕೆಗಳು, ಇರುವುದರಿಂದ ಓದಲು ಸುಲಭವಿದೆ. ಪ್ರಾಚೀನ ಭಾಷೆಯಲ್ಲಿಯೇ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಇಥೋಪಿಯಾ,ಈಜಿಪ್ಟ್, ಸಿರಿಯಾ,ಇರಾಖ್,ಯಮನ್,ಪರ್ಶಿಯಾ,ರೋಮ್,ಬಹ್‌ರೈನ್ ರಾಜರುಗಳಿಗೆ ಪತ್ರ ಬರೆದಿದ್ದರು. ಉಸ್ಮಾನ್ ರಳಿಯಲ್ಲಾಹು ಅನ್ಹುರವರ ಕಾಲದಲ್ಲಿ ಅದೇ ಪ್ರಾಚೀನ ಅರಬಿ ಭಾಷೆಯಲ್ಲಿ ಏಳು ಖುರ್‌ಆನ್ ಕೋಪಿಗಳನ್ನು ತಯಾರಿಸಲಾಗಿತ್ತು. ಅದರ ಒಂದು ಕೋಪಿ ಸಮರ್‌ಕಂದ್ ನಲ್ಲಿ ಈಗಲೂ ಸಂರಕ್ಷಿಸಿಡಲಾಗಿದೆ. ಪುರಾತನ ಲಿಪಿಯೂ ಈಗಲೂ ಕಾಣಲು ಸಾಧ್ಯವಿದೆ.
ಪ್ರಪಂಚದ ಸಾವಿರಾರು ಭಾಷೆಗಳ ಪೈಕಿ ಲಿಪಿ ಇಲ್ಲದ್ದು, ಲಿಪಿ ಇರುವಂತ ಭಾಷೆಗಳು ಇವೆ. ಆದರೆ, ಅರಬಿ ಭಾಷೆಗೆ ಅದರ ಆರಂಭ ಕಾಲದಿಂದಲೂ ಲಿಪಿ ಇದೆ ಎನ್ನುವುದು ಅರಬಿ ಭಾಷೆಗಿರುವ ವಿಶೇಷತೆ ಯಾಗಿದೆ. ಚಿತ್ರ ಲಿಪಿ, ಸೂಚನೆ ಲಿಪಿ ಬಳಿಕ ಅಕ್ಷರ ಮಾಲೆಗಳ ಸಹಿತ ಕಾಲಕಾಲಕ್ಕೆ ಬದಲಾವಣೆಗಳು ಹೊಂದಿ ಪರಿಷ್ಕರಿಸಲ್ಪಟ್ಟು ಇಂದು ಕಾಣುವ ರೀತಿಗೆ ಅರಬಿ ಲಿಪಿ ಬಂದು ತಲುಪಿದೆ. ಏಷ್ಯಾ ಕಂಡದಲ್ಲಿರುವ ಮುಸ್ಲಿಂ ರಾಷ್ಟ್ರದ ರಾಷ್ಟ್ರೀಯ ಭಾಷೆಯಾಗಿದೆ ಅರಬಿ. ಪೌರಾಣಿಕ ಭಾಷೆಗಳಲ್ಲಿ ಒಂದಾದ ಅರಬಿ ಭಾಷೆಯು ಖುರ್‌ಆನ್ ಅವತೀರ್ಣ ದೊಂದಿಗೆ ಮುಸ್ಲಿಮರ ಜೀವನದ ಭಾಗವಾಗಿ ಮಾರ್ಪಟ್ಟಿತು. ಮುಸ್ಲಿಮರ ಆರಾಧನಾ ಕ್ರಮಗಳು ಅರಬಿ ಭಾಷೆಯಲ್ಲೇ ಆಗಬೇಕಾದ ಕಾರಣ ಅರಬಿ ಭಾಷೆಯೊಂದಿಗೆ ಮುಸ್ಲಿಮರಿಗೆ ಅಭೇದ್ಯವಾದ ನಂಟು ಬೆಳೆಯಿತು.ಸಾಂಸ್ಕೃತಿಕ, ವೈಜ್ಞಾನಿಕ, ವ್ಯವಹಾರಿಕ, ವೈದ್ಯಕೀಯ ರಂಗದಲ್ಲಿ ಅರಬಿ ಭಾಷೆಯು ನೈಪುಣ್ಯ ಹೊಂದಿರುವ ಕಾರಣ ಮುಸ್ಲಿಮರೇತರೂ ಈ ಭಾಷೆಯನ್ನು ಕಲಿತು ಅದರಲ್ಲಿ ವ್ಯವಹರಿಸುವ ಸಾಮರ್ಥ್ಯ ಹೊಂದಿದ್ದರು.ಅರಬಿ ಲಿಪಿಯು ಕಾಣಲು ಸುಂದರವಾಗಿ ಆಕರ್ಷಣೀಯವಾಗಿದೆ. ಚಂದ್ರನ ಮತ್ತು ಮನುಷ್ಯ ಆಕಾರದಲ್ಲಿ ರೂಪುಗೊಂಡ ಅರಬಿ ಲಿಪಿಯೂ ಬರೆಯುವುದು ಹೇಗೆ ಚಂದವೂ ಕಾಣಲೂ ಕೂಡ ಹಾಗೆಯೇ ಸೊಗಸಾಗಿದೆ.
ಪೌರಾಣಿಕ ಅರಬಿ ಲಿಪಿಯಲ್ಲಿ ಚುಕ್ಕೆಗಳು, ಸ್ವರಗಳು ಇರಲಿಲ್ಲ.ಹಾಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಮಟ್ಟದಲ್ಲಿದ್ದ ಅರಬಿಗಳು ಅಕ್ಷರಾಭ್ಯಾಸದಲ್ಲಿ ಹಿಂದುಳಿಯಲು ಇದು ಕಾರಣ ವಾಗಿತ್ತು.ಅರಬಿ ಅಕ್ಷರಗಳನ್ನು ಗುರುತಿಸಲು ಕೆಲವು ಸೂಚನೆಗಳು ಮಾತ್ರ ಇದ್ದವು. ಅರಬಿ ಅಕ್ಷರ ಮಾಲೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದವರಿಗೆ ಮಾತ್ರ ಅದನ್ನು ಓದಲು ಸಾಧ್ಯವಾಗುತ್ತಿತ್ತು. ಪೈಗಂಬರ್ ﷺ ರ ಕಾಲ ಮತ್ತು ಬಳಿಕ ಆಡಳಿತ ನಡೆಸಿದ ನಾಲ್ಕು ಖಲೀಫರ ಕಾಲದಲ್ಲಿಯೂ ಚುಕ್ಕೆಗಳು,ಸ್ವರಗಳು ಇಲ್ಲದೆಯೇ ಅದೇ ಪ್ರಾಚೀನ ಅರಬಿ ಲಿಪಿಯೂ ಜಾರಿಯಲ್ಲಿತ್ತು. ಉಮವಿಯ್ಯ ಆಡಳಿತ ಕಾಲದಲ್ಲಿ ಅರಬಿ ಲಿಪಿಯನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಠರಿಸಲಾಯಿತು. ಇಂದು ಕಾಣುವ ಅರಬಿ ಲಿಪಿಯು ಉಮವಿಯ್ಯ ಆಡಳಿತ ಕಾಲದಲ್ಲಿ ಪರಿಷ್ಕರಣೆ ಹೊಂದಿದ ಲಿಪಿಯಾಗಿದೆ. ಅರಬಿ ಲಿಪಿಯನ್ನು ಒಟ್ಟು ಮೂರು ಬಾರಿ ಪರಿಷ್ಕರಿಸಲಾಗಿದೆ.ಮೂರನೇ ಬಾರಿಗೆ ಪರಿಷ್ಕೃತ ಗೊಂಡ ಲಿಪಿಯಾಗಿದೆ ಇಂದು ಕಾಣುವ ಲಿಪಿ. ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಿಂದ ಉಸ್ಮಾನ್ ರಳಿಯಲ್ಲಾಹು ಅನ್ನುರವರ ಕಾಲ ತನಕ ಪುರಾತನ ಕಾಲದಲ್ಲಿದ್ದ ಅದೇ ಅರಬಿ ಲಿಪಿ ಜಾರಿಯಲ್ಲಿತ್ತು. ಇಸ್ಲಾಂ ಅರಬ್ ಜಗತ್ತಿನಿಂದ ಹೊರ ಹೋದಾಗ ಅರಬಿಯೇತರರಿಗೆ ಚುಕ್ಕೆಗಳು,ಸ್ವರಗಳು ಇಲ್ಲದೆ ಅರಬಿ ಲಿಪಿಯನ್ನು ಓದಲು ಕಷ್ಟವಾಯಿತು.ಖುರ್‌ಆನ್ ಪಾರಾಯಣದಲ್ಲಿ ಹಲವಾರು ತಪ್ಪು ಗಳು ಉಂಟಾದವು. ಖುರ್‌ಆನ್‌ನಲ್ಲಿ ತಪ್ಪಾದ ಪದಗಳು ನುಸುಳ ತೊಡಗಿದವು. ಇದನ್ನು ಅರಿತ ನಾಲ್ಕನೇ ಖಲೀಫಾ ಅಲೀ ರಳಿಯಲ್ಲಾಹು ಅನ್ನುರವರು ಇದಕ್ಕೊಂದು ಪರಿಹಾರ ಕಾಣಲು ಅಬೂ ಅಸ್ವದುದ್ದುಅಲೀ ರಳಿಯಲ್ಲಾಹು-ಅನ್ನು ರವರನ್ನು ನೇಮಿಸಿದರು. ಅವರು ಅಕ್ಷರ ಗಳನ್ನು ಸುಲಭವಾಗಿ ಗುರುತಿಸುವಂತಾಗಲು ಪದಗಳ ಕೊನೆಯಲ್ಲಿ ಚುಕ್ಕೆಗಳನ್ನು ಜಾರಿಗೆ ತಂದರು. ಅಕಾರವನ್ನು ಗುರುತಿಸಲು ಅಕ್ಷರಗಳ ಮೇಲೆ ಒಂದು ಚುಕ್ಕೆ, ಇಕಾರವನ್ನು ಗುರುತಿಸಲು ಕೇಳ ಭಾಗದಲ್ಲೊಂದು ಚುಕ್ಕೆ, ಉಕಾರವನ್ನು ಗುರುತಿಸಲು ಅಕ್ಷರದ ಬದಿಯಲ್ಲಿ ಒಂದು ಚುಕ್ಕೆಯನ್ನು ಹಾಕುವ ಸಂಪ್ರದಾಯಕ್ಕೆ ಮುನ್ನುಡಿ ಇಟ್ಟರು.ಈ ರೀತಿಯಲ್ಲಿ ಚುಕ್ಕೆಗಳನ್ನು ಅಳವಡಿಸಿಯೂ ಅರಬಿ ಓದುವಿಕೆಯಲ್ಲಿ ತಪ್ಪು ಗಳು ಉಂಟಾದವು. ಚುಕ್ಕೆ ಗಳ ಸೇರಿಸುವಿಕೆ ಪರಿಹಾರ ವಾಗಲಿಲ್ಲ. ಖುರ್‌ಆನ್ ಓದುವಾಗ ತಪ್ಪು ಗಳು ಸಂಭವಿಸುವುದು ತಪ್ಪಲಿಲ್ಲ. ಅಬ್ದುಲ್ ಮಲಿಕ್ ಬಿನ್ ಮರ್ವಾನ್ ರವರ ಆಡಳಿತ ಕಾಲದಲ್ಲಿ ಅರಬಿ ಲಿಪಿಯನ್ನು ಮತ್ತೆ ಪರಿಷ್ಕರಿಸಲಾಯಿತು. ಇರಾಕ್‌ನ ಜಿಲ್ಲಾಧಿಕಾರಿಯಾಗಿದ್ದ ಹಜ್ಜಾಜ್ ಬಿನ್ ಯೂಸುಫ್ ರವರ ಆಜ್ಞೆ ಪ್ರಕಾರ ಅಬೂ ಅಸ್‌ದುದ್ದುಅಲೀ ರವರ ಶಿಷ್ಯರಾದ ಯಹ್ಯ ಬಿನ್ ಯಅ್‌ಮುರ್ ಮತ್ತು ನಸ್ರು ಬಿನ್ ಆಸ್ವಿಮ್ ರವರು ಅರಬಿ ಭಾಷೆಯನ್ನು ಪರಿಷ್ಠರಿಸಿದರು. ಅವರು “ಫಾಅ್” ಅಕ್ಷರದ ಕೆಳಗೆ ಒಂದು ಚುಕ್ಕೆ, ಖಾಫ್’ ಅಕ್ಷರದ ಮೇಲೆ ಒಂದು ಚುಕ್ಕೆ ನೀಡಿದರು. ಇದು ಸ್ವಲ್ಪ ಮಟ್ಟಿಗೆ ಯಶಸ್ವಿ ಕಂಡಿತು. ಹಿಜರಿ ಎರಡನೇ ಶತಮಾನದಲ್ಲಿ ಖಲೀಲ್ ಬಿನ್ ಅಹ್ಮದ್ ಫರಾಹಿದೀ ರವರು ಅರಬಿ ಲಿಪಿಯನ್ನು ಮತ್ತೆ ಪರಿಷ್ಕರಿಸಿದರು.ವ್ಯಂಜನಾಕ್ಷರಗಳಾಗಿ ಮಾತ್ರ ಇದ್ದ ಅರಬಿ ಅಕ್ಷರಮಾಲೆಗೆ ಸ್ವರಗಳನ್ನು ನೀಡುವ ಮೂಲಕ ಪರಿಷ್ಕರಿಸಲಾಯಿತು. ಆ ಪರಿಷ್ಠರಣೆಯ ಮೂಲಕ ಅರಬಿ ಲಿಪಿಯು ಸಂಪತ್ಭರಿತವಾದವು. ಇಂದು ಕಾಣುವ ಅರಬಿ ಲಿಪಿಯು ಅದೇ ಆಗಿದೆ. ಅರಬಿ ಭಾಷೆಯಲ್ಲಿರುವ ಸ್ವರಗಳಿಗೆ ಪ್ರತ್ಯೇಕ ಅಕ್ಷರ ರೂಪವಿಲ್ಲ ಎಂಬುದು ಅದರ ಪ್ರತ್ಯೇಕತೆಯಾಗಿದೆ.
ಪ್ರತಿಯೊಂದು ಅಕ್ಷರಕ್ಕೂ ಸೂಕ್ತವಾದ ರೀತಿಯಲ್ಲಿ ಚುಕ್ಕೆ ಗಳನ್ನು, ಅಕಾರ, ಉಕಾರ, ಇಕಾರ, ಒತ್ತಕ್ಷರ, ದೀರ್ಘಾಕ್ಷರಗಳನ್ನು ಅಳವಡಿಸಿ, ಅಕ್ಷರಗಳನ್ನು ಓದಲು ಸುಲಭಗೊಳಿಸಿದರು. ಯಾವ ಅಕ್ಷರ ಯಾವ ರೀತಿಯಲ್ಲಿ ಓದಬೇಕೆಂದು ಹಾಗೆ ಓದುವ ರೂಪ ಹೇಗೆ ಗುರುತಿಸುವುದೆಂದು ಅತ್ಯಂತ ಲಲಿತವಾಗಿ ತಿಳಿಯುವಂತೆ ಅರಬಿ ಭಾಷೆಯನ್ನು ಪರಿಷ್ಕರಿಸಿದರು.’ಅಲಿಫ್’ ನಿಂದ ‘ಯಾಅ್ ಅಕ್ಷರ ತನಕ ಇಪ್ಪತ್ತೊಂಬತ್ತು ಅಕ್ಷಗಳು ಅರಬಿ ಅಕ್ಷರ ಮಾಲೆಯಲ್ಲಿದೆ.ಈ ಅಕ್ಷರ ಮಾಲೆಗೆ `ಹುರೂಫುಲ್ ಹಿಜಾಇಯ್ಯಾ” ಎಂದು ಕರೆಯುತ್ತಾರೆ. ಅರಬಿ ಅಕ್ಷರಗಳಿಗೆ ಪ್ರತಿಯೊಂದಕ್ಕೂ ಉಚ್ಚಾರಣಾ ಸ್ಥಳವಿದೆ.ಒಟ್ಟಾರೆ ಐದು ಸ್ಥಳಗಳಿಂದ ಇಪ್ಪತ್ತೊಂಬತ್ತು ಅಕ್ಷರಗಳು ಉಚ್ಚರಿಸಲ್ಪಡುತ್ತವೆ. ಗಂಟಲು, ತುಟಿ,ಮೂಗು,ಬಾಯಿಯ ಒಳಭಾಗ,ನಾಲಗೆ ಈ ಐದು ಸ್ಥಳಗಳಿಂದ ಮಾತ್ರವೇ ಅರಬಿ ಅಕ್ಷರಗಳನ್ನು ಉಚ್ಚರಿಸಲು ಸಾಧ್ಯ.ಉಚ್ಚಾರಣೆ ಜಾಗ ಬದಲಾದರೆ ಅರಬಿ ಪದದ ಅರ್ಥವೆ ಬದಲಾಗುತ್ತದೆ. ಅದೇ ರೀತಿಯಲ್ಲಿ ಅಕಾರವನ್ನು ಉಕಾರ ಮಾಡಿ ಓದುವಾಗಲೂ ಅರ್ಥ ಬದಲಾಗುತ್ತದೆ.ಅರಬಿ ಒಂದು ಪದಕ್ಕೆ ವಿಭಿನ್ನ ಅರ್ಥಗಳಿವೆ.ಸಂದರ್ಭಾನುಸಾರ ಪದಗಳ ಅರ್ಥಗಳು ಬದಲಾಗುತ್ತವೆ. ಈ ರೀತಿಯಲ್ಲಿ ಬದಲಾವಣೆಗಳು ತಿಳಿಯಬೇಕಾದರೆ ಅರಬಿಕ್ ವ್ಯಾಕರಣದ ಬಗ್ಗೆ ಆಳವಾದ ಜ್ಞಾನ ಇರಬೇಕು.ಅರಬಿ ಲಿಪಿಗಳನ್ನು ಬರೆಯುವ ರೂಪಕ್ಕೆ ಬೇರೆ ಬೇರೆ ಹೆಸರುಗಳಿವೆ.ಜಗತ್ತಿನಲ್ಲಿ ಯಾವ ಭಾಷೆಗೂ ಇಲ್ಲದ ಸುಂದರವಾದ ಹಲವು ವಿಧದ, ಬೇರೆ ಬೇರೆ ರೂಪದಲ್ಲಿರುವ ಲಿಪಿಗಳು ಅರಬಿ ಭಾಷೆಗಿದೆ.ವೈವಿಧ್ಯಮಯವಾದ ಲಿಪಿಗಳ ಆಗರವಾಗಿದೆ ಅರಬಿ ಭಾಷೆ.ನಸ್‌ಖೀ, ರುಖಯಿ, ಕೂಫೀ, ಸ್ಸುಲುಸೀ, ಪೊನ್ನಾನಿ, ಫಾರಿಸೀ, ರೈಹಾನೀ, ದೀವಾನೀ, ದೀವಾನೀ ಜಲೀ, ತಾಜ್ ಮುಂತಾದ ಅಪಿಗಳು ಅವುಗಳಲ್ಲಿ ಪ್ರಮುಖವಾದವುಗಳಾಗಿವೆ.
ಆರಂಭ ಕಾಲದಲ್ಲಿ ನಸ್‌ಖೀ, ಕೂಫೀ ಎಂಬ ಎರಡು ವಿಧದ ಲಿಪಿ ಮಾತ್ರ ವಿತ್ತು. ನಸ್‌ಖೀ ಲಿಪಿಗೆ ಖತ್ತುಲ್ ಹಿಜಾಝ್ ಎಂಬ ಹೆಸರೂ ಇತ್ತು. ಖುರ್‌ಆನ್ బರೆಯಲು ಉಪಯೋಗಿಸುವ ಲಿಪಿ ಎಂಬ ಕಾರಣಕ್ಕೆ ನಸ್‌ಖೀ ಎಂಬ ಹೆಸರು ಬಂತು.ಇಂದು ಚಾಲ್ತಿಯಲ್ಲಿರುವ ಅರಬಿ ಲಿಪಿ ಮತ್ತು ಹೆಚ್ಚಾಗಿ ಬಳಕೆ ಮಾಡಲ್ಪಡುವ ಲಿಪಿ ಯಾಗಿದೆ ಖತ್ತುನ್ನಸ್‌ಕ್. ಖುರ್‌ಆನ್ ಬರೆಯಲು ಬಳಕೆ ಮಾಡಲ್ಪಡುವ ಲಿಪಿಯೂ ಇದೇ ಆಗಿದೆ. ಇತರ ಅರಬಿ ಲಿಪಿಗಳ ಬಳಕೆ ಮಾತ್ರ ಅಪರೂಪ. ಕೇರಳದಲ್ಲಿ ಉಪಯೋಗಿಸುವ ಅರಬಿ ಲಿಪಿಗೆ ಮಲಬಾರಿ,ಪೊನ್ನಾನಿ ಎಂದು ಹೇಳುತ್ತಾರೆ.ಇದನ್ನು ಬರೆಯುವ ರೂಪಗಳಲ್ಲಿ ವ್ಯತ್ಯಾಸ ಕಾಣಬಹುದು. ಖುರ್‌ಆನ್ ನಲ್ಲಿ ಕಾಣುವ ಅರಬಿ ಪದಗಳು ಸಾಹಿತ್ಯ ಗಳಿಂದ ಅಲಂಕಾರ ಗೊಂಡದ್ದಾಗಿದೆ. ಭಾರತೀಯ ಮುಸ್ಲಿಮರು ಪ್ರತ್ಯೇಕವಾಗಿ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರು ಈ ಅರಬಿ ಯನ್ನು ಕಲಿಯುತ್ತಾರೆ. ಈ ಅರಬಿಯಲ್ಲಿಯೇ ಮಾತನಾಡುತ್ತಾರೆ. ಆದರೆ, ಮುಸ್ಲಿಂ ರಾಷ್ಟ್ರಗಳಲ್ಲಿ ಮಾತನಾಡುವ ಅರಬಿ ಭಾಷೆಯು ಗ್ರಾಮೀಣ ಭಾಷೆಯಾಗಿದೆ. ಅದಕ್ಕೂ ಖುರ್‌ಅನ್‌ನಅರಬಿ ಭಾಷೆಗೂ ಬಹಳಷ್ಟು ವ್ಯತ್ಯಾಸ ಕಾಣಬಹುದು.







