janadhvani

Kannada Online News Paper

ಕೊಪ್ಪಳ : ಕಾರ್ಮಿಕ ಸಂಘಟನೆಗಳಿಂದ ಜುಲೈ 9 ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ಕರೆ

ಕೊಪ್ಪಳ : ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜುಲೈ 9 ರಂದು ಬುಧವಾರ ನಡೆಯುವ ಅಖಿಲ ಭಾರತ ಸಾರ್ವತ್ರಿಕಾ ಮುಷ್ಕರ ಯಶಸ್ವಿಗೊಳಿಸಲು ಕರೆ ನೀಡಿದೆ.

ಸಭೆಯಲ್ಲಿ ಚರ್ಚಿಸಿದ ಮುಖಂಡರು ದೈತ್ಯ ಏಕಸ್ವಾಮ್ಯ ಬಂಡವಾಳಶಾಹಿಗಳ ಆಣತಿಯ ಮೇರೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದುಡಿಯುವ ಜನರ ಜೀವನ ಮತ್ತು ಜೀವನೋಪಾಯದ ಮೇಲೆ ನಿರಂತರ ಫ್ಯಾಸಿಸ್ಟ್ ದಾಳಿಗಳನ್ನು ಎಸಗುತ್ತಿರುವ ಸಮಯದಲ್ಲಿ ಈ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಕಾರ್ಪೊರೇಟ್‌ಗಳ ಹಿತಾಸಕ್ತಿಗಾಗಿ ತನ್ನ ‘ವ್ಯಾಪಾರ ಮಾಡಲು ಸುಲಭತೆ’ (Ease of doing business) ನೀತಿಗೆ ಅನುಗುಣವಾಗಿ ಒಟ್ಟಾರೆಯಾಗಿ ದುಡಿಯುವ ಜನರ ಮೇಲೆ ವಾಸ್ತವವಾಗಿ ಗುಲಾಮಗಿರಿಯ ಷರತ್ತುಗಳನ್ನು ಹೇರುವ ಸಮಗ್ರ ನೀಲನಕ್ಷೆಗೆ ಅನುಗುಣವಾಗಿ ಸರ್ಕಾರ ಮುಂದಡಿಯಿಡುತ್ತಿದೆ.

ಅವಿರತ ತ್ಯಾಗ ಬಲಿದಾನಗಳಿಂದ ಗಳಿಸಿದ 29 ಕಾರ್ಮಿಕ ಕಾನೂನುಗಳನ್ನು ಹರಣಗೊಳಿಸಿ ಕಾರ್ಮಿಕ-ವಿರೋಧಿ 4 ಕಾರ್ಮಿಕ ಸಂಹಿತೆ (ಲೇಬರ್ ಕೋಡ್)ಗಳನ್ನು ಜಾರಿಗೊಳಿಸಲು ಸರ್ಕಾರವು ಅತ್ಯಂತ ಸಕ್ರಿಯವಾಗಿದೆ. ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಬಹುತೇಕ ಜಾಲ್ತಿಯಲ್ಲಿರುವ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಆಸ್ತಿತ್ವದಲ್ಲಿರುವ ಉದ್ಯೋಗಗಳನ್ನು ಕಡಿತಗೊಳಿಸಿ, ಖಾಯಂ ಉದ್ಯೋಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ.

ಗುತ್ತಿಗೆ, ಹೊರಗುತ್ತಿಗೆ, ಹೊಸದಾಗಿ ಜಾರಿಗೊಳಿಸಲಾಗುವ ‘ನಿಗದಿತ ಅವಧಿ ಉದ್ಯೋಗ’ (fixed term employment) ಇತ್ಯಾದಿಗಳು ಆಳುವ ಬಂಡವಾಳಶಾಹಿ ವರ್ಗ ಮತ್ತು ಅದರ ಅಧೀನ ಸರಕಾರಗಳು ತಮ್ಮ ಇಚ್ಛೆಯಂತೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮತ್ತು ವಜಾ ಮಾಡಲು ಕೈಗೊಂಡ ಕರಾಳ ವಿನ್ಯಾಸವಾಗಿದೆ. ಕಾರ್ಮಿಕರು ಕೆಲಸ ಮಾಡುವ ಅವಧಿ. ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇತ್ಯಾದಿ ಸೇರಿದಂತೆ ವ್ಯಾಖ್ಯಾನಿಸಲಾದ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಎಲ್ಲಾ ಮೂಲಭೂತ ಹಕ್ಕುಗಳಿಗೆ ಹಾಗೂ ಯೂನಿಯನ್ ಮಾಡುವ ಹಕ್ಕು, ಮನ್ನಣೆ, ಸಾಮೂಹಿಕ ಚೌಕಾಸಿ, ಅಂದೋಲನಗಳು ಮತ್ತು ‘ಮುಷ್ಕರದ ಹಕ್ಕು’ ಸೇರಿದಂತೆ ಯಾವುದೇ ರೀತಿಯ ಸಾಮೂಹಿಕ ಪ್ರತಿಭಟನೆಯ ಹಕ್ಕುಗಳನ್ನು ಪ್ರತಿಪಾದಿಸಲು ಇದು ಗಂಭೀರ ಸವಾಲಾಗಿದೆ.

ಕೆಲವು ವರ್ಷಗಳಿಂದ ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ಕಾರ್ಮಿಕ ಸಂಘಟನೆಗಳಿಂದ ಪ್ರಬಲ ಪ್ರತಿರೋಧ ಇದ್ದುದರ ಪರಿಣಾಮವಾಗಿ ಇಲ್ಲಿಯವರೆಗೆ ಜಾರಿಗೊಳಿಸಲಾಗಿಲ್ಲ. ಹೀಗಾಗಿ, ಕಾರ್ಮಿಕ ಸಂಹಿತೆಗಳನ್ನು ಸೋಲಿಸಲು ಮತ್ತು ರದ್ದುಗೊಳಿಸಲು ಈ ಕಡು ಕಾರ್ಮಿಕ-ವಿರೋಧಿ ಸಂಹಿತೆಗಳ ವಿರುದ್ಧ ಪ್ರಬಲವಾದ ಹೋರಾಟವನ್ನು ಸಂಘಟಿಸುವ ಉದ್ದೇಶದಿಂದ ಈ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ.ಭಾರತೀಯ ರೈಲ್ವೆ, ರಸ್ತೆ ಸಾರಿಗೆ, ವಾಯುಮಾರ್ಗ, ಕಲ್ಲಿದ್ದಲು ಮತ್ತು ಕಲ್ಲಿದ್ದಲು-ರಹಿತ ಗಣಿಗಳು, ಬಂದರು ಮತ್ತು ಹಡಗುಕಟ್ಟೆ, ರಕ್ಷಣೆ, ವಿದ್ಯುತ್, ಉಕ್ಕು, ಪೆಟ್ರೋಲಿಯಂ, ಅಂಚೆ, ಟೆಲಿಕಾಂ, ಬ್ಯಾಂಕ್‌ಗಳು ಮತ್ತು ವಿಮಾ ಕ್ಷೇತ್ರಗಳಂತಹ ಸಾರ್ವಜನಿಕ ಕ್ಷೇತ್ರಗಳ ಹಣವನ್ನು ವಿನಿಯೋಗಿಸಿ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಧಾರೆಯೆರೆಯುವ ದುರುದ್ದೇಶದಿಂದ ‘ರಾಷ್ಟ್ರೀಯ ನಗದೀಕರಣ ಪೈಪ್ ಲೈನ್’ ನಾಮಾಂಕಿತದೊಂದಿಗೆ ಕೇಂದ್ರ ಬಿಜೆಪಿ ಸರ್ಕಾರ ಖಾಸಗೀಕರಣ ಮಾಡಹೊರಟಿದೆ.

ಜಾಗತೀಕರಣದ ಸಮಗ್ರ ನೀತಿಯ ಒಂದು ಭಾಗವಾಗಿ ಖಾಸಗೀಕರಣದ ಚಾಲನೆಯನ್ನು ಕಳೆದ ಶತಮಾನದ 90ರ ದಶಕದ ಆರಂಭದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರವು ಪ್ರಾರಂಭಿಸಿತು ಎಂಬುದನ್ನು ಮರೆಯಬಾರದು. ನಂತರದಲ್ಲಿ, ಕೇಂದ್ರ ಮತ್ತು ರಾಜ್ಯಗಳಲ್ಲಿ ಎಲ್ಲಾ ರಾಜಕೀಯ ಬಣ್ಣಗಳ ಸರ್ಕಾರಗಳು ಕಾರ್ಮಿಕವಿರೋಧಿ, ಜನವಿರೋಧಿ ನೀತಿಯನ್ನು ಅನುಸರಿಸಿದವು. ಪ್ರಸ್ತುತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅತ್ಯಂತ ವೇಗವಾಗಿ ಅನುಷ್ಠಾನಗೊಳಿಸುತ್ತಿದೆ. ಆದ್ದರಿಂದ, ಖಾಸಗೀಕರಣದ ನೀತಿಯು ಮೂಲಭೂತವಾಗಿ ನಮ್ಮನ್ನು ಆಳುತ್ತಿರುವ ಬಂಡವಾಳಶಾಹಿ ವರ್ಗದ ನೀತಿಯಾಗಿದೆ. ಈ ನೀತಿಯನ್ನು ಜಾರಿಗೊಳಿಸಲು ಎಲ್ಲಾ ಬಂಡವಾಳಶಾಹಿ ಸರ್ಕಾರಗಳು ಸನ್ನದ್ಧವಾಗಿವೆ.

NPS ವಿರುದ್ಧ ದೇಶವ್ಯಾಪಿ ಪ್ರತಿಭಟನಾ ಚಳುವಳಿಗಳ ನಂತರ ಹೊಸ ಪಿಂಚಣಿ ವ್ಯವಸ್ಥೆಗೆ (NPS) ಪರ್ಯಾಯ ಆಯ್ಕೆಯಾಗಿ ಏಕೀಕೃತ ಪಿಂಚಣಿ ಯೋಜನೆ (UPS) ಅನ್ನು ಜಾರಿಗೊಳಿಸುವ ಹುನ್ನಾರ. ಇದು ಘೋರ ಅನ್ಯಾಯವಾಗಿದ್ದು, ನಿವೃತ್ತ ನೌಕರರು ತಮ್ಮ ಉಳಿವಿಗಾಗಿ ಅವರ ಸಾಮಾಜಿಕ ಭದ್ರತೆಯ ಪ್ರಮುಖ ಸವಲತ್ತಾಗಿರುವ ಪಿಂಚಣಿ ಪರಿಕಲ್ಪನೆಯನ್ನೇ ಸಮಾಧಿ ಮಾಡಿದಂತಾಗುತ್ತದೆ. ಆದ್ದರಿಂದ ಎಲ್ಲಾ ಸಂಬಂಧಿತ ಉದ್ಯೋಗಿಗಳಿಗೆ ದೇಣಿಗೆ ರಹಿತ ಬೆಲೆ ಸೂಚ್ಯಂಕಕ್ಕೆ ಲಿಂಕ್ ಮಾಡಲಾದ ಹಳೆಯ ಪಿಂಚಣಿ ಯೋಜನೆ (OPS) ಖಾತ್ರಿಪಡಿಸಿ ಹಾಗೂ ವೇತನ ಆಯೋಗಗಳು ಮತ್ತು ವಿವಿಧ ವೇತನ ಮಂಡಳಿಗಳ ನಿಯತಕಾಲಿಕ ವೇತನ/ವೇತನ ಪರಿಷ್ಕರಣೆಗಳ ಸಂಪೂರ್ಣ ಸವಲತ್ತುಗಳನ್ನು ಖಚಿತಪಡಿಸಬೇಕು.

ಈ ಹಿನ್ನಲೆಯಲ್ಲಿ ಕಾರ್ಮಿಕ ವಿರೋಧಿ ಬಂಡವಾಳಶಾಹಿ ನೀತಿಗಳನ್ನು ಸೋಲಿಸಲು ಪ್ರಬಲ ಜಂಟಿ ಕಾರ್ಮಿಕ ಹೋರಾಟದ ತುರ್ತು ಅವಶ್ಯಕತೆಯಿದೆ ಎಂದು ಸಭೆ ಗಮನಕ್ಕೆ ತಂದು. ಈ ನಿಟ್ಟಿನಲ್ಲಿ ಸಾರ್ವತ್ರಿಕ ಮುಷ್ಕರವನ್ನು ಯಶಸ್ವಿಗೊಳಿಸಲು ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರು ಮನವಿ ಮಾಡಿದರು.ಜುಲೈ 9. 2025ರಂದು ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಗರದ ಕಾವ್ಯಾನಂದ (ಈಶ್ವರ)ಪಾರ್ಕ್ ಬಳಿ ಸೇರಿ ಬೃಹತ್ ಮೆರವಣಿಗೆಯು ಅಶೋಕ ವೃತ್ತ ತಲುಪಿ ಮಾನವ ಸರಪಳಿ ರಚಿಸಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.ಪೂರ್ವ ಭಾವಿ ಸಭೆಯಲ್ಲಿ ಜೆಸಿಟಿಯು ಸಮಿತಿ ಮುಖಾಂಡರಾದ ಬಸವರಾಜ್ ಶೀಲವಂತರ್, ಖಾಸಿಮ್ ಸರ್ದಾರ, ಶರಣು ಗಡ್ಡಿ,ಕೆ.ಬಿ.ಗೋನಾಳ್,ಎಸ್.ಎ.ಗಫಾರ್, ತುಕಾರಾಂ ಪಾಟ್ರೋಟಿ, ಹನುಮೇಶ್ ಕಲಮಂಗಿ, ಮಹದೇವಪ್ಪ, ಗಾಳೆಪ್ಪ ಮುಂಗೋಲಿ, ಮಖಬೂಲ್ ರಾಯಚೂರು, ಕೇಶವ್ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.