ಸರ್ಕಾರ ಮತ್ತು ಪೊಲೀಸರ ನಡೆಯನ್ನು ಪ್ರಶ್ನಿಸುವ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದ ಕಾರಣಕ್ಕೆ ಸಮಾಜ ಸೇವಕ,ಸುನ್ನೀ ಸಂಘಟಕ, ದ. ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕಿನಾರಾ ಅವರ ಮೇಲೆ ಕೇಸು ದಾಖಲಿಸಿರುವುದನ್ನು ಕರ್ನಾಟಕ ಉಲಮಾ ಕೋರ್ಡಿನೇಷನ್ ತೀವ್ರವಾಗಿ ಖಂಡಿಸಿದೆ.
ಅಭಿಪ್ರಾಯ ಸ್ವಾತಂತ್ರ್ಯ ಪ್ರತಿಯೊಬ್ಬ ನಾಗರಿಕನ ಸಂವಿಧಾನಬದ್ಧ ಮೂಲಭೂತ ಹಕ್ಕು. ಆಡಳಿತಗಾರರ ತಪ್ಪುಗಳನ್ನು ಟೀಕಿಸಬೇಕಾದುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಮುಸ್ಲಿಮರ ಪವಿತ್ರ ಹಬ್ಬವಾದ ಬಕ್ರೀದ್ ದಿನ ಬಲಿದಾನಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ ಮತ್ತು ಸರಕಾರದ ಅನಾಸ್ಥೆಯನ್ನು ಪ್ರಶ್ನಿಸುವ ವಾಟ್ಸಪ್ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಮುಖ್ಯಮಂತ್ರಿಗಳನ್ನೋ, ವಿಧಾನ ಸಭಾಧ್ಯಕ್ಷರನ್ನೋ ಉಲ್ಲೇಖಿಸಿಲ್ಲ. ಆದಾಗ್ಯೂ ಮುಖ್ಯಮಂತ್ರಿ ಮತ್ತು ಸ್ಪೀಕರ್ ಅವರನ್ನು ಅವಹೇಳಿಸಿದ ಆರೋಪ ಹೊರಿಸಲಾಗಿದೆ. ಇದರ ಹಿಂದೆ ಯಾವುದೋ ಷಡ್ಯಂತ್ರಗಳಿದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಕೂಲಂಕಷ ತನಿಖೆ ನಡೆಸಿ ಸತ್ಯಾವಸ್ಥೆಯನ್ನು ಹೊರತರಬೇಕು ಎಂದು ಉಲಮಾ ಕೋರ್ಡಿನೇಷನ್ ಆಗ್ರಹಿಸಿದೆ.
ಉಲಮಾ ಕೋರ್ಡಿನೇಷನ್ ಅಧೀನದಲ್ಲಿ ನಡೆದ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಪ್ರತಿಭಟನಾ ಸಮ್ಮೇಳನದ ಸಂಚಾಲಕ ಸೇರಿದಂತೆ ವಿವಿಧ ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅಶ್ರಫ್ ಕಿನಾರ ಅವರು ಬಡವರು, ರೋಗಿಗಳು, ಅಪಘಾತಕ್ಕೀಡಾದವರು ಸೇರಿದಂತೆ ನೊಂದವರ ಪರವಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿದ್ದಾರೆ. ಅಂತಹವರ ಮೇಲೆ ಕ್ಷುಲ್ಲಕ ಆರೋಪ ಹೊರಿಸಿ ದುರ್ಬಲಗೊಳಿಸುವುದು ಸರಿಯಲ್ಲ. ಬಹಿರಂಗ ವೇದಿಕೆಗಳಲ್ಲಿ ಮತ ವಿಭಾಗಗಳನ್ನು ಪರಸ್ಪರ ಎತ್ತಿ ಕಟ್ಟುವಂತೆ ಉದ್ರೇಕಕಾರಿ ಭಾಷಣ ಮಾಡಿದವರನ್ನು ಬಂಧಿಸಲು ಆಸಕ್ತಿ ತೋರದ ಪೊಲೀಸರು, ವಾಟ್ಸಪ್ ಸಂದೇಶ ಒಂದರ ಹಿಂದೆ ಬಿದ್ದು ಕೇಸು ದಾಖಲಿಸಿರುವುದು ಹಾಸ್ಯಾಸ್ಪದ. ತಕ್ಷಣ ಅವರ ಮೇಲಿನ ಕೇಸ್ ವಾಪಾಸ್ ಪಡೆಯ ಬೇಕೆಂದು ದರ್ಗಾ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ