ರಿಯಾದ್: ಸೌದಿ ಅರೇಬಿಯಾದಲ್ಲಿ ಈದುಲ್ ಫಿತರ್ ಹಬ್ಬದ ಪ್ರಯುಕ್ತ ರಜೆ ಘೋಷಿಸಲಾಗಿದೆ. ಮಾರ್ಚ್ 29 ರಂದು ರಜೆ ಪ್ರಾರಂಭವಾಗಲಿದ್ದು, ಏಪ್ರಿಲ್ 2 ರವರೆಗೆ ಮುಂದುವರಿಯಲಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ಪ್ರಕಟಿಸಿದೆ.
ಈ ವರ್ಷದಲ್ಲಿ ಐದು ದಿನಗಳ ರಜೆ ಲಭಿಸುವುದರಿಂದ ವಲಸಿಗರು ಸೇರಿದಂತೆ ಎಲ್ಲರೂ ಸಂತಸಗೊಂಡಿದ್ದಾರೆ. ಏಪ್ರಿಲ್ 2 ರವರೆಗೆ ರಜೆ ಇದೆ, ವಾರಾಂತ್ಯದ ರಜೆ ಏಪ್ರಿಲ್ 3 ರಿಂದ ಪ್ರಾರಂಭವಾಗುವುದರಿಂದ, ಆ ದಿನವೂ ಸಾರ್ವಜನಿಕ ರಜೆ ಸಿಗುವ ನಿರೀಕ್ಷೆಯಲ್ಲಿದ್ದಾರೆ ವಲಸಿಗರು.
ನಿಯಮಿತ ರಜೆ ಶುಕ್ರವಾರದಿಂದ ಪ್ರಾರಂಭವಾಗುವುದರಿಂದ, ವಾರಾಂತ್ಯದ ರಜಾ ದಿನಗಳ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಿದ್ದಲ್ಲಿ, ಒಟ್ಟು ಎಂಟು ದಿನಗಳ ರಜೆ ಸಿಗಲಿದೆ. ಏತನ್ಮಧ್ಯೆ, ಸೌದಿ ಎಕ್ಸ್ಚೇಂಜ್ ರಜಾದಿನವು ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 3 ರಂದು ವ್ಯಾಪಾರ ಪುನರಾರಂಭಗೊಳ್ಳಲಿದೆ. ಕಾರ್ಮಿಕ ಕಾನೂನಿನ ಕಾರ್ಯನಿರ್ವಾಹಕ ನಿಯಮಗಳ ಆರ್ಟಿಕಲ್ 24, ಪ್ಯಾರಾಗ್ರಾಫ್ 2 ರ ನಿಬಂಧನೆಗಳನ್ನು ಉದ್ಯೋಗದಾತರು ಪಾಲಿಸಬೇಕು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.