ಬೆಂಗಳೂರು: ‘ಹಜ್ ಭವನದ ಹೆಸರನ್ನು ಟಿಪ್ಪು ಸುಲ್ತಾನ್ ಹಜ್ ಘರ್ ಎಂಬುದಾಗಿ ಬದಲಾಯಿಸಬೇಕು ಎಂದು ಮುಸ್ಲಿಂ ಧರ್ಮಗುರುಗಳು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆಗೆ ಸಮಾಲೋಚಿಸುತ್ತೇನೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್, ತಿಳಿಸಿದರು.
‘ಹಜ್ ಭವನ ಸ್ವಾಯತ್ತ ಕೇಂದ್ರ. ಹೀಗಾಗಿ ಟಿಪ್ಪು ಸುಲ್ತಾನ್ ಹೆಸರಿಡಲು ಯಾವುದೇ ವಿರೋಧ ಇರುವುದಿಲ್ಲ ಎಂದು ಭಾವಿಸಿದ್ದೇನೆ’ ಎಂದೂ ಜಮೀರ್ ಹೇಳಿದರು.
‘ಕಳೆದ ವರ್ಷ ಹಜ್ ಯಾತ್ರೆ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪ ಆಗಿತ್ತು. ಇತ್ತೀಚೆಗೆ ನಡೆದ ಹಜ್ ಸಮಿತಿಯ ಪರಿಶೀಲನಾ ಸಭೆಯಲ್ಲಿ ಮುಸ್ಲಿಂ ಗುರುಗಳು ಈ ವಿಷಯ ಪ್ರಸ್ತಾಪ ಮಾಡಿದರು. ಅವರ ಮನವಿಯನ್ನು ಕುಮಾರಸ್ವಾಮಿ ಅವರಿಗೆ ನೀಡುತ್ತೇನೆ. ಲಗಾಮು ಅವರ ಕೈಯಲ್ಲಿ ಇದೆ’ ಎಂದರು. ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ.ಪರಮೇಶ್ವರ ಅವರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.
‘ಟಿಪ್ಪು ಜಯಂತಿ ಬೇರೆ, ಈ ವಿಷಯ ಬೇರೆ. ಬಿಜೆಪಿಯವರು ಇದಕ್ಕೆ ವಿರೋಧ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಂದಲೂ ಸಲಹೆ ಪಡೆಯುತ್ತೇನೆ’ ಎಂದರು.
ತನ್ವೀರ್ ಸೇಠ್‌ಗೆ ತಿರುಗೇಟು
ಶಾಸಕ ತನ್ವೀರ್ ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್, ‘ನಾನು ಲೀಡರ್ ಆಗಲು ಬಂದಿಲ್ಲ. ಯಾರನ್ನೂ ಓವರ್‌ಟೇಕ್ ಮಾಡುವುದೂ ಇಲ್ಲ. ಸಮಾಜಸೇವಕನಾಗಲು ಬಂದಿದ್ದೇನೆ. ಯಾರು ಲೀಡರ್ ಆಗಬೇಕು ಎಂಬುದನ್ನು ದೇವರು ಹಾಗೂ ಜನರು ನಿರ್ಧರಿಸುತ್ತಾರೆ’ ಎಂದರು.
‘ಟಿಪ್ಪು ಹೆಸರಿನಿಂದ ಕಳಂಕ’
‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಜ್ ಭವನಕ್ಕೆ 50 ಕೋಟಿ ಅನುದಾನ ನೀಡಲಾಗಿತ್ತು. ಬಿಜೆಪಿ ಮಾಡಿದ್ದ ಅಭಿವೃದ್ಧಿ ಕೆಲಸವದು. ಅದನ್ನು ಹೈಜಾಕ್ ಮಾಡಿ ಟಿಪ್ಪು ಸುಲ್ತಾನ್ ಹೆಸರಿಡಲು ಮುಂದಾಗಿರುವುದು ತಪ್ಪು’ ಎಂದು ಬಿಜೆಪಿ ಶಾಸಕ ಆರ್.ಅಶೋಕ ಆಕ್ಷೇಪ ವ್ಯಕ್ತಪಡಿಸಿದರು.
‘ಒಂದು ವೇಳೆ ಹೆಸರಿಟ್ಟರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕ ಎಚ್ಚರಿಸಿದೆ.