ರಿಯಾದ್: ಸೌದಿ ಅರೇಬಿಯಾದಲ್ಲಿ ಬಹು ಪ್ರವೇಶ ಕುಟುಂಬ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸುವುದನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿರುವುದರಿಂದ ತಮ್ಮ ಕುಟುಂಬಗಳನ್ನು ಶಾಲೆಯ ರಜಾದಿನಗಳಲ್ಲಿ ಸೌದಿ ಅರೇಬಿಯಾಕ್ಕೆ ಕರೆತರಲು ತಯಾರಿ ನಡೆಸುತ್ತಿರುವ ವಲಸಿಗರಿಗೆ ನಿರಾಶೆಯನ್ನುಂಟು ಮಾಡಿದೆ.
ಭಾರತ ಸೇರಿದಂತೆ 14 ದೇಶಗಳ ಜನರಿಗೆ ಬಹು ಪ್ರವೇಶ ಕುಟುಂಬ ಭೇಟಿ ವೀಸಾಗಳನ್ನು ನಿಷೇಧಿಸುವ ಹೊಸ ವೀಸಾ ನೀತಿಯನ್ನು ಸೌದಿ ಅರೇಬಿಯಾ ಜಾರಿಗೆ ತಂದಿದೆ ಎಂದು ವರದಿಗಳು ತಿಳಿಸಿವೆ. ದೀರ್ಘಾವಧಿಯ ಭೇಟಿ ವೀಸಾಗಳಲ್ಲಿ ಅಕ್ರಮವಾಗಿ ಪ್ರವೇಶಿಸುವ ಹಜ್ ಯಾತ್ರಿಕರನ್ನು ನಿಯಂತ್ರಿಸುವ ಭಾಗವಾಗಿ ಈ ನಿಷೇಧ ಹೇರಲಾಗಿದೆ ಮತ್ತು ಫೆಬ್ರವರಿ 1 ರಿಂದ ಈ ನಿಷೇಧ ಜಾರಿಯಲ್ಲಿದೆ ಎಂದು ಸ್ಥಳೀಯ ಅರಬ್ ಮಾಧ್ಯಮಗಳು ವರದಿ ಮಾಡಿವೆ.
ಆದರೆ, 30 ದಿನಗಳ ಮಾನ್ಯತೆ ಹೊಂದಿರುವ ಸಿಂಗಲ್ ಎಂಟ್ರಿ ವೀಸಾಗೆ ಮಾತ್ರ ಎಂಒಎಫ್ಎಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ವೀಸಾ ಸ್ಟಾಂಪ್ ಮಾಡಿ ಸೌದಿ ಅರೇಬಿಯಾ ಪ್ರವೇಶಿಸಿ, ಪ್ರತಿ ತಿಂಗಳು ನವೀಕರಿಸಬಹುದಾಗಿದೆ. ಗರಿಷ್ಠ ಮೂರು ಬಾರಿ ಈ ಸಿಂಗಲ್ ಎಂಟ್ರಿ ವೀಸಾವನ್ನು ನವೀಕರಿಸಬಹುದಾಗಿದೆ ಅಥವಾ 90 ದಿನಗಳವರೆಗೆ ಸೌದಿ ಅರೇಬಿಯಾವನ್ನು ತೊರೆಯದೆ ಇದನ್ನು ಆನ್ ಲೈನ್ ಮೂಲಕ ನವೀಕರಿಸಬಹುದಾಗಿದೆ. ಆದರೆ, ಸೌದಿಯಿಂದ ಹೊರಗೆ ಹೋದರೆ, ಈ ವೀಸಾದ ಸಿಂಧುತ್ವವು ಕೊನೆಗೊಳ್ಳುತ್ತದೆ. ಸಿಂಗಲ್ ಎಂಟ್ರಿ ವೀಸಾದಲ್ಲಿ ಆಗಮಿಸಿದವರು 30 ದಿನಗಳ ನಂತರ 100 ರಿಯಾಲ್ ಶುಲ್ಕ ಪಾವತಿಸಿ ಅಬ್ಶೀರ್ ಮೂಲಕ ನವೀಕರಿಸಬಹುದು. ಇದನ್ನು ಸತತ ಮೂರು ಬಾರಿ ಮಾತ್ರ ನವೀಕರಿಸಬಹುದಾಗಿದೆ.
ಆದಾಗ್ಯೂ, ಮಲ್ಟಿಪಲ್ ಎಂಟ್ರಿ ವೀಸಾ VFSಗೆ ಹೋಗಲು ಮತ್ತು ಮುದ್ರೆ ಹಾಕಲು ಅಥವಾ ಮುದ್ರೆ ಹಾಕಿದ ವೀಸಾದೊಂದಿಗೆ ಸೌದಿ ಅರೇಬಿಯಾಕ್ಕೆ ಬರಲು ಪ್ರಸ್ತುತ ಯಾವುದೇ ಅಡೆತಡೆಗಳಿಲ್ಲ.
ಈಗಾಗಲೇ ಸೌದಿ ಅರೇಬಿಯಾದಲ್ಲಿರುವ ಕುಟುಂಬ ಮಲ್ಟಿಪಲ್ ಎಂಟ್ರಿ ವೀಸಾ ಹೊಂದಿರುವವರು ಮೊದಲಿನಂತೆಯೇ ಅದೇ ಸೇವೆಗಳನ್ನು ಪಡೆಯುತ್ತಾರೆ . ಅವರು ಯಾವುದೇ ಆತಂಕ ಪಡುವ ಆವಶ್ಯಕತೆಯಿಲ್ಲ. ಮೊದಲ ಮೂರು ತಿಂಗಳ ನಂತರ, ವೀಸಾಗಳನ್ನು ಆನ್ಲೈನ್ನಲ್ಲಿ ನವೀಕರಿಸಲಾಗುತ್ತದೆ ಮತ್ತು ನಂತರ ಬಹರೈನ್ ಮತ್ತು ಜೋರ್ಡಾನ್ನಂತಹ ದೇಶಗಳಿಗೆ ಪ್ರಯಾಣಿಸಿ ಹಿಂದಿರುಗುವ ಮೂಲಕ ನವೀಕರಿಸಬಹುದಾಗಿದೆ. ಇಲ್ಲಿಯವರೆಗೆ ಅದಕ್ಕೆ ಯಾವುದೇ ಅಡೆತಡೆಗಳಿಲ್ಲ.
ಬಹು ಪ್ರವೇಶ ಕುಟುಂಬ ಭೇಟಿ ವೀಸಾಗಳನ್ನು ನಿಷೇಧಿಸುವ ನಿರ್ಧಾರವು ಭಾರತ, ಅಲ್ಜೀರಿಯಾ, ಬಾಂಗ್ಲಾದೇಶ, ಈಜಿಪ್ಟ್, ಇಥಿಯೋಪಿಯಾ, ಇಂಡೋನೇಷ್ಯಾ, ಇರಾಕ್, ಜೋರ್ಡಾನ್, ಮೊರಾಕೊ, ನೈಜೀರಿಯಾ, ಪಾಕಿಸ್ತಾನ, ಸುಡಾನ್, ಟುನೀಶಿಯಾ ಮತ್ತು ಯೆಮೆನ್ ದೇಶಗಳ ಜನರಿಗೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಗಳು ಇನ್ನೂ ಬಂದಿಲ್ಲ. ಆದರೆ ಪಾಕಿಸ್ತಾನದ ಟ್ರಾವೆಲ್ ಏಜೆನ್ಸಿಗಳು ಸೌದಿ ವಿದೇಶಾಂಗ ಸಚಿವಾಲಯದಿಂದ ವಿವರಣೆಯನ್ನು ಕೇಳಿದಾಗ, ಮಲ್ಟಿಪಲ್ ವೀಸಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂಬ ಇ-ಮೇಲ್ ಸಂದೇಶ ಲಭಿಸಿರುವುದಾಗಿ ಮಾಹಿತಿ ಲಭಿಸಿದೆ.ಹಜ್ ಋತುವಿನ ಬಳಿಕ ಬಹು-ಪ್ರವೇಶ ಕುಟುಂಬ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಟ್ರಾವೆಲ್ ಸಂಸ್ಥೆಗಳು ಹೇಳುತ್ತವೆ.