janadhvani

Kannada Online News Paper

ವಕ್ಫ್ ತಿದ್ದುಪಡಿ ವಿಧೇಯಕ ಮತ್ತು ಯುಸಿಸಿ ಜಾರಿಗೆ ಸುನ್ನೀ ಸಂಘಟನೆಗಳಿಂದ ಖಂಡನೆ

ವಿರೋಧ ಪಕ್ಷಗಳ ಸದಸ್ಯರ ಅಭಿಪ್ರಾಯಗಳನ್ನು ಕೂಡ ಅವಗಣಿಸಿ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆ ಎಂದು ಸುನ್ನೀ ಸಂಘಟನೆಗಳ ಒಕ್ಕೂಟ ಖಂಡಿಸಿದೆ.

ವಕ್ಫ್ ತಿದ್ದುಪಡಿ ವಿಧೇಯಕಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯು ಮುಸ್ಲಿಂ ಸಮುದಾಯವನ್ನು ತೀವ್ರ ಆತಂಕಕ್ಕೆ ತಳ್ಳಿದ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ವಿಧೇಯಕವನ್ನು ಯಾವುದೇ ಬದಲಾವಣೆಯಿಲ್ಲದೆ ಅನುಮೋದಿಸಿರುವುದು ಅತ್ಯಂತ ನಿರಾಶಾದಾಯಕ ಬೆಳವಣಿಗೆಯಾಗಿದೆ. ವಿರೋಧ ಪಕ್ಷಗಳ ಸದಸ್ಯರ ಅಭಿಪ್ರಾಯಗಳನ್ನು ಕೂಡ ಅವಗಣಿಸಿ ಏಕಾಏಕಿ ತೀರ್ಮಾನ ಕೈಗೊಂಡಿರುವುದು ಆಡಳಿತ ಪಕ್ಷದ ಸರ್ವಾಧಿಕಾರಿ ಧೋರಣೆ ಎಂದು ಸುನ್ನೀ ಸಂಘಟನೆಗಳ ಒಕ್ಕೂಟ ಖಂಡಿಸಿದೆ.

ಭಾರತದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ, ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ದೇಶ ಕಟ್ಟುವ ಕೆಲಸದಲ್ಲೂ ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯವು ಆಡಳಿತ ವರ್ಗದಿಂದ ಅನ್ಯಾಯಕ್ಕೊಳಗಾಗುತ್ತಲೇ ಇದೆ. ಇದೀಗ ಕೇಂದ್ರ ಸರ್ಕಾರವು ವಕ್ಫ್ ಕಾಯಿದೆಯನ್ನು ಬದಲಿಸಲು ಮುಂದಾದರೆ, ಉತ್ತರಾಖಾಂಡ ಸರ್ಕಾರವು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇವೆರಡೂ ನಡೆಗಳು ಸಂವಿಧಾನದತ್ತ ಹಕ್ಕುಗಳನ್ನು ಕಬಳಿಸುವ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರುವ ಕೃತ್ಯವಾಗಿದ್ದು, ವಿಶೇಷತಃ ಮುಸ್ಲಿಮರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಎಲ್ಲರ ಹಕ್ಕುಗಳನ್ನು ರಕ್ಷಿಸುವ ಸಂವಿಧಾನವನ್ನು ಗೌರವಿಸಿ ಇಂತಹ ಕೃತ್ಯಗಳಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಸುನ್ನೀ ನಾಯಕರು ಮನವಿ ಮಾಡಿದ್ದಾರೆ.

ಈ ಬಗ್ಗೆ ಕಾವಲಕಟ್ಪೆ ಅಲ್ ಖಾದಿಸ ವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಎನ್ ಕೆ ಎಂ ಶಾಫಿ ಸಅದಿ ಠರಾವು ಮಂಡಿಸಿದರು. ಸುನ್ನೀ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ ಪಿ ಅಹ್ಮದ್ ಸಖಾಫಿ ಅಧ್ಯಕ್ಷತೆಯಲ್ಲಿ ಸುನ್ನೀ ಉಲಮಾ ಒಕ್ಕೂಟದ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಉದ್ಘಾಟಿಸಿದರು.ಮುಸ್ಲಿಂ ಜಮಾಅತ್ ನಾಯಕರಾದ ಜಿ ಎಂ ಕಾಮಿಲ್ ಸಖಾಫಿ, ಎಸ್ ವೈ ಎಸ್ ನಾಯಕರಾದ ಡಾ ಝೈನಿ ಕಾಮಿಲ್, ರಾಜ್ಯಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಕ್,ಎಸ್ ಜೆ ಎಂ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ, ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಹಮೀದ್ ಬಜಪೆ, ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಉಪಸ್ಥಿತರಿದ್ದರು. ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಎಂಬಿಎಂ ಸಾದಿಖ್ ಸ್ವಾಗತಿಸಿ, ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಧನ್ಯವಾದವಿತ್ತರು.

error: Content is protected !! Not allowed copy content from janadhvani.com