ಮಂಗಳೂರು: ಇಲ್ಲಿನ ಹೊರವಲಯದ ಕೃಷ್ಣಾಪುರದಲ್ಲಿ ಹಾಡು ಹಗಲೇ ಬಾಲಕನೋರ್ವನನ್ನು ಅಪಹರಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
ಕೃಷ್ಣಾಪುರ 8th A ಕೃಷ್ಣ ಮಠ ರಸ್ತೆಯಲ್ಲಿ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ 12 ವರ್ಷದ ಬಾಲಕನನ್ನು ನಾಲ್ವರು ಅಪಹರಣಕಾರರು ತಮ್ಮ ವಾಹನದಲ್ಲಿ ಅಪಹರಿಸಲು ಯತ್ನಿಸಿದ್ದಾರೆ. ಇದೇ ವೇಳೆ ವಾಹನಕ್ಕೆ ಏನೋ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಅಪಹರಣಕಾರರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಈ ಬಗ್ಗೆ ಸುರತ್ಕಲ್ ಪೋಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪರಿಸರದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಹಾಡು ಹಗಲೇ ನಡೆದಿರುವ ಇಂಥಾ ಅಪಹರಣ ಘಟನೆಯಿಂದಾಗಿ ಪರಿಸರವಾಸಿಗಳಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.