ರಿಯಾದ್: ಸೌದಿ ಅರೇಬಿಯಾದ ಅನೇಕ ವಸತಿ ಗೃಹಗಳು ಜನವಾಸವಿಲ್ಲದೆ ಖಾಲಿ ಬಿದ್ದಿರುವುದಾಗಿ ವರದಿಯಾಗಿದೆ. ಅಂದಾಜಿನ ಪ್ರಕಾರ ಒಂಬತ್ತು ಲಕ್ಷದಷ್ಟು ಕಟ್ಟಡಗಳು ಉಪಯೋಗ ಶೂನ್ಯ ವಾಗಿ ಖಾಲಿ ಉಳಿದಿದೆ. ಅಲ್ಲಿನ ವಸತಿ ಸಚಿವಾಲಯವು ಈ ಬಗ್ಗೆ ಪ್ರತೀ ಪ್ರಾಂತ್ಯಗಳ ಖಾಲಿ ಉಳಿದಿರುವ ಕಟ್ಟಡಗಳ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿದೆ.
ಹದಿಮೂರು ಪ್ರಾಂತ್ಯಗಳಲ್ಲಿ 9,07,000 ಪ್ಲಾಟ್ ಗಳು ಖಾಲಿ ಉಳಿದಿದ್ದು, ಅಬಹಾದಲ್ಲಿ ಅತೀ ಹೆಚ್ಚು ಪ್ಲಾಟ್ ಗಳು ಖಾಲಿ ಬಿದ್ದಿರುವುದಾಗಿ ತಿಳಿದು ಬಂದಿದೆ. ಇಲ್ಲಿನ ಮೂವತ್ತು ಶೇಕಡಾ ದಷ್ಟು ಪ್ಲಾಟ್ ಗಳಲ್ಲಿ ಜನವಾಸವಿಲ್ಲ. ಮಕ್ಕಾ, ಸಕಾಕ ಮುಂತಾದೆಡೆ ಸುಮಾರು 23 ಶೇಕಡಾ ಕಟ್ಟಡಗಳು ಬಿಕೋ ಅನ್ನುತ್ತಿದೆ. ಅರಾರ್, ಮದೀನಾ, ಬುರೈದಾ ಮುಂತಾದೆಡೆ 16 ಶೇಕಡಾ, ಹಾಯಿಲ್, ಜಿಝಾನ್ ಮುಂತಾದೆಡೆ 15 ಶೇಕಡಾ ವಸತಿ ಕೇಂದ್ರಗಳಲ್ಲಿ ಜನವಾಸವಿಲ್ಲ. ಅದೇ ವೇಳೆ ರಾಜಧಾನಿ ರಿಯಾದಿನಲ್ಲೂ 10 ಶೇಕಡಾ ಪ್ಲಾಟ್‌ಗಳು ಖಾಲಿ ಉಳಿದಿದೆ.
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಜಾರಿಗೆ ಬಂದ ಕಾನೂನಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗಳು ಪಲಾಯನ ಗೈಯ್ಯುವಂತಾಗಿದ್ದು, ಹಲವಾರು ವಲಯಗಳಲ್ಲಿನ ದೇಶೀಕರದಿಂದಾಗಿ ವಿದೇಶೀಯರು ತಮ್ಮ ಕೆಲಸವನ್ನು ಕಳಕೊಂಡಿದ್ದಾರೆ. ಅದೂ ಅಲ್ಲದೆ ಕಳೆದ ವರ್ಷದಿಂದ ವಿದೇಶೀಯರ ಕುಟುಂಬದವರಿಗೆ ಲೆವಿ ಜಾರಿಗೆ ತರಲಾಗಿತ್ತು. ಈ ಕಾರಣದಿಂದಾಗಿ ಗಣನೀಯವಾಗಿ ವಿದೇಶೀಯರು ಸೌದಿ ತೊರೆಯುತ್ತಿದ್ದು, ಅಲ್ಲಿನ ಪ್ಲಾಟ್‌ಗಳು ಖಾಲಿಯಾಗಲು ಇದೂ ಒಂದು ಕಾರಣ ಎಂದು ಅಂದಾಜಿಸಲಾಗಿದೆ.