janadhvani

Kannada Online News Paper

ಸದೃಢ ನ್ಯಾಯಾಂಗ ವ್ಯವಸ್ಥೆ ಇದ್ದಿದ್ದರೆ, ಪ್ರಧಾನಿ ಮೋದಿ ಮತ್ತು ಯೋಗಿ ಜೈಲಿನಲ್ಲಿರುತ್ತಿದ್ದರು- ನಿಶ್ಚಲಾನಂದ ಸರಸ್ವತಿ

2014 ರಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದು ತಾವು ಮಾಡಿದ ತಪ್ಪು ಎಂದು ಪುರಿ ಶಂಕರಾಚಾರ್ಯ ಹೇಳಿದ್ದಾರೆ.

ಉಜ್ಜೈನ್: ರಾಮಮಂದಿರದಲ್ಲಿ ಪ್ರಧಾನಿ ಮೋದಿ ಮೂರ್ತಿ ಪ್ರತಿಷ್ಠಾಪನೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕಾರ್ಯಕ್ರಮದಿಂದ ದೂರ ಉಳಿದಿದ್ದ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಈಗ ಮತ್ತೊಮ್ಮೆ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಉಜ್ಜೈನ್ ನ ಮಹಾಕಾಲೇಶ್ವರ ದೇವಾಲಯ ಆಡಳಿತ ಮಂಡಳಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ, ಭಾರತದಲ್ಲಿ ಸದೃಢ ನ್ಯಾಯಾಂಗ ವ್ಯವಸ್ಥೆ ಇದ್ದಿದ್ದರೆ, ಈ ವೇಳೆಗೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೈಲಿನಲ್ಲಿರುತ್ತಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ 2014 ರಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದು ತಾವು ಮಾಡಿದ ತಪ್ಪು ಎಂದು ಪುರಿ ಶಂಕರಾಚಾರ್ಯ ಹೇಳಿದ್ದಾರೆ. 2014 ರಲ್ಲಿ ಮೋದಿ ಪ್ರಧಾನಿಯಾಗುವುದಕ್ಕೂ ಮೊದಲು ಪುರಿಗೆ ತೆರಳಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರ ಆಶೀರ್ವಾದ ಪಡೆದಿದ್ದರು.

ಈ ಕುರಿತು ಹರೀಶ್ ತಿವಾರಿ ಎಂಬವರು ಎಕ್ಸ್ ನಲ್ಲಿ ಮಾಡಿದ್ದ ಪೋಸ್ಟ್ ನ್ನು ಹಂಚಿಕೊಂಡ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ‘ನಿರ್ಭೀತ ಜಗದ್ಗುರು ‘ಎಂದು ಕರೆದಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಈ ಹಿಂದೆ ಹಲವು ಬಾರಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ನವೆಂಬರ್‌ ನಲ್ಲಿ ಮೋದಿಯನ್ನು ‘ಸುಳ್ಳುಗಾರ’ ಎಂದು ಕರೆದಿದ್ದ ಸ್ವಾಮಿ, 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ಮಾಡಿದ್ದಕ್ಕಾಗಿ ಪ್ರಾಯಶ್ಚಿತ್ತ ಪಡುವುದಾಗಿ ಹೇಳಿದ್ದರು.

error: Content is protected !! Not allowed copy content from janadhvani.com