janadhvani

Kannada Online News Paper

ಯುದ್ಧಾಪರಾಧ: ಇಸ್ರೇಲ್‌ ಪ್ರಧಾನಿ ನೆತನ್ಯಾಹು ವಿರುದ್ಧ ICC ಅರೆಸ್ಟ್ ವಾರೆಂಟ್

ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದು ಅಪರಾಧ- ICC

ಟೆಲ್‌ ಅವಿವ್‌: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹಾಗೂ ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ‌ ಯೋವ್‌ ಗ್ಯಾಲಂಟ್‌ ವಿರುದ್ಧ ನೆದರ್ಲ್ಯಾಂಡ್ ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ (ICC) ಬಂಧನ ವಾರೆಂಟ್‌ ಹೊರಡಿಸಿದೆ.

ಗಾಜಾ ಪಟ್ಟಿಯಲ್ಲಿನ ಯುದ್ಧ ಹಾಗೂ 2023ರ ಅಕ್ಟೋಬರ್‌ ನಲ್ಲಿ ನಡೆದ ಘರ್ಷಣೆಗಳಲ್ಲಿ ಯುದ್ಧಾಪರಾಧ ಹಾಗೂ ಮಾನವೀಯತೆಯ ವಿರುದ್ಧ ಅಪರಾಧ ಎಸಗಿದ್ದಾರೆ ಎಂಬ ಆರೋಪದ ಮೇಲೆ ಕೋರ್ಟ್‌ ನೆತನ್ಯಾಹು ಹಾಗೂ ಗ್ಯಾಲಂಟ್ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ.

ಕಳೆದ ಮೇ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ನ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರು ಇಸ್ರೇಲ್‌ ನಾಯಕರ ವಿರುದ್ಧ ಯುದ್ಧಾಪರಾಧಗಳು ಹಾಗೂ ಮಾನವೀಯತೆಯ ವಿರುದ್ಧದದ ಅಪರಾಧಗಳಿಗಾಗಿ ವಾರೆಂಟ್‌ ಜಾರಿಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಮನವಿಯನ್ನು ಕೋರ್ಟ್‌ ಪುರಸ್ಕರಿಸಿತು. ಐಸಿಸಿಯ ಪ್ರೀ-ಟ್ರಯಲ್ ಚೇಂಬರ್ I, ತ್ರಿಸದಸ್ಯ ನ್ಯಾಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಇಸ್ರೇಲ್‌ ದಾಳಿಯಿಂದ ಗಾಜಾದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಆಹಾರ, ನೀರು, ಔಷಧ, ವೈದ್ಯಕೀಯ ಸೌಲಭ್ಯ, ಇಂಧನ ಹಾಗೂ ವಿದ್ಯುತ್‌ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂಬ ಅಂಶಗಳನ್ನು ಕೋರ್ಟ್‌ ಉಲ್ಲೇಖಿಸಿತು. ಅಲ್ಲದೇ ನಾಗರಿಕರ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲು ನಿರ್ದೇಶನ ನೀಡುವುದು ಮತ್ತು ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದು ಅಪರಾಧ ಎಂದಿರುವ ನ್ಯಾಯಾಲಯ, ನೆತನ್ಯಾಹು ಸೇರಿ ಹಲವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.

ಈ ನಡುವೆ ನೆತನ್ಯಾಹು ನೆದರ್ಲೆಂಡ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ. ಒಂದು ವೇಳೆ ತೆರಳಿದರೆ, ಐಸಿಸಿ ವಾರೆಂಟ್‌ ಅಡಿಯಲ್ಲಿ ಅಲ್ಲಿಯೇ ಬಂಧಿಸಲಾಗುತ್ತದೆ ಎಂದು ಡಚ್ ವಿದೇಶಾಂಗ ಸಚಿವ ಕ್ಯಾಸ್ಪರ್ ವೆಲ್ಡ್‌ಕ್ಯಾಂಪ್ ಹೇಳಿರುವುದಾಗಿ ವರದಿಯಾಗಿದೆ.

error: Content is protected !! Not allowed copy content from janadhvani.com