ಕುವೈತ್ ಸಿಟಿ : ಕುವೈತ್ ಕ್ಯಾಬಿನೆಟ್ ಪ್ರಸ್ತುತ 60 ವರ್ಷ ಹಳೆಯ ಕಾನೂನಿನಿಂದ ಹಲವಾರು ಬದಲಾವಣೆಗಳೊಂದಿಗೆ ಹೊಸ ಕರಡು ರೆಸಿಡೆನ್ಸಿ ಕಾನೂನನ್ನು ಅನುಮೋದಿಸಿದೆ. ಹೊಸ ಕಾನೂನು ಅಕ್ರಮ ವಲಸಿಗರಿಗೆ ಆಶ್ರಯ ನೀಡುವುದನ್ನು ನಿಷೇಧಿಸುತ್ತದೆ, ಜೊತೆಗೆ ಕಾನೂನನ್ನು ಉಲ್ಲಂಘಿಸುವವರಿಗೆ ಕಠಿಣ ದಂಡವನ್ನು ವಿಧಿಸುತ್ತದೆ.
ಪ್ರಧಾನಿ ಮತ್ತು ಆಂತರಿಕ ಮತ್ತು ರಕ್ಷಣಾ ಸಚಿವ ಶೈಖ್ ಫಹದ್ ಯೂಸುಫ್ ಅಸ್ಸಬಾಹ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕರಡು ಕಾನೂನಿಗೆ ಅನುಮೋದನೆ ನೀಡಲಾಯಿತು. ಕುವೈತ್ ಅಮೀರ್ ಅವರ ಅನುಮೋದನೆಯ ನಂತರ ಕಾನೂನು ಜಾರಿಗೆ ಬರಲಿದೆ. ಕರಡು ಪ್ರಸ್ತಾವನೆಯು ವೀಸಾ ವ್ಯಾಪಾರ ನಿಷೇಧ, ವಿದೇಶಿಯರನ್ನು ಗಡೀಪಾರು ಮಾಡುವ ಮಾರ್ಗಸೂಚಿಗಳು ಮತ್ತು ರೆಸಿಡೆನ್ಸಿ ಉಲ್ಲಂಘಿಸುವವರ ವಿರುದ್ಧ ದಂಡವನ್ನು ಒಳಗೊಂಡಿದೆ.
ವಲಸಿಗರ ಪ್ರವೇಶ, ಅಧಿಕಾರಿಗಳಿಗೆ ಸೂಚನೆ, ರೆಸಿಡೆನ್ಸಿ ವ್ಯಾಪಾರ, ಸಂಬಂಧಿತ ಅಪರಾಧಗಳು ಮತ್ತು ಉಲ್ಲಂಘಿಸುವವರಿಗೆ ದಂಡವನ್ನು ನಿಯಂತ್ರಿಸುವ ಮತ್ತು ವಿವರಿಸುವ ಏಳು ಅಧ್ಯಾಯಗಳು ಹೊಸ ಕಾನೂನಿನಲ್ಲಿ ಒಳಗೊಂಡಿದೆ ಎಂದು ಕ್ಯಾಬಿನೆಟ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಶೈಖ್ ಮುಬಾರಕ್ ಹೋಮುದ್ ಅಲ್ ಜಾಬರ್ ಅಸ್ಸಬಾಹ್ ಅವರನ್ನು ಕುವೈತ್ ನ್ಯಾಶನಲ್ ಗಾರ್ಡ್‌ನ ಮುಖ್ಯಸ್ಥರನ್ನಾಗಿ ನೇಮಿಸುವ ಕರಡು ಆದೇಶಕ್ಕೂ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ,ಕುವೈತ್ ಪುರಸಭೆಯ ಮಹಾನಿರ್ದೇಶಕ ಸೌದ್ ಅಲ್-ದಬ್ಬೂಸ್ ಅವರ ರಾಜೀನಾಮೆಯನ್ನು ಮುನ್ಸಿಪಲ್ ವ್ಯವಹಾರಗಳ ಸಚಿವ ಅಬ್ದುಲ್ಲತೀಫ್ ಅಲ್-ಮಿಶಾರಿ ಮಂಗಳವಾರ ಅಂಗೀಕರಿಸಿದ್ದಾರೆ.