janadhvani

Kannada Online News Paper

ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ವಫಾತ್

ಉಳ್ಳಾಲ: ಸಮಸ್ತ ಕೇಂದ್ರ ಮುಶಾವರ ಸದಸ್ಯರೂ,ಉಳ್ಳಾಲ ಖಾಝಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ, ಪ್ರಮುಖ ಧಾರ್ಮಿಕ ವಿದ್ವಾಂಸರಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ ಬುಖಾರಿ ಜು.8ರಂದು ಬೆಳಗ್ಗೆ ವಫಾತಾದರು. ಅವರಿಗೆ 65 ವರ್ಷ ಪ್ರಾಯವಾಗಿತ್ತು.

ಮರ್ಹೂಂ ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಅವರ ಪುತ್ರ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ (ಕೂರತ್ ತಂಙಳ್) ಕೇರಳದ ಕಣ್ಣೂರು ಜಿಲ್ಲೆಯ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದಾರೆ.

ಇಂದು ಅಪರಾಹ್ನ ಉಳ್ಳಾಲ ಸೆಯ್ಯಿದ್ ಮದನಿ ದರ್ಗಾ ವಠಾರದಲ್ಲಿ ನಿಗದಿಯಾಗಿದ್ದ ಸಯ್ಯಿದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್‌ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬೆಳಗ್ಗೆ ಎಟ್ಟಿಕ್ಕುಳಂನಲ್ಲಿರುವ ಮನೆಯಲ್ಲಿ ಸಿದ್ದರಾಗುತ್ತಿದ್ದರು. ಈ ವೇಳೆ ಹೃದಯ ಸ್ತಂಭನ ಆಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಅಪರಾಹ್ನ 2 ಗಂಟೆಯ ವರೆಗೆ ಎಟ್ಟುಕ್ಕುಳಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ 7 ಗಂಟೆ ಸುಮಾರಿಗೆ ಅವರ ಪಾರ್ಥಿವ ಶರೀರವು ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರಕ್ಕೆ ತಲುಪಲಿದೆ. ಆ ಬಳಿಕ ಕಡಬ ತಾಲೂಕಿನ ಕೂರತ್ ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ದಫನ ಕಾರ್ಯ ನೆರವೇರಲಿದೆ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ತಿಳಿಸಿದ್ದಾರೆ.

2014ರಲ್ಲಿ ಸಯ್ಯಿದ್ ತಾಜುಲ್ ಉಲಮಾರ ವಫಾತ್ ನಂತರ ಅವರ ಪುತ್ರರಾದ ಸಯ್ಯಿದ್ ಕೂರತ್ ತಂಙಳ್ ರವರು ಉಳ್ಳಾಲದ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಮೊಹಲ್ಲಾಗಳ ಖಾಝಿಯಾಗಿರುವ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್, ಕಾಸರಗೋಡು ದೇಳಿಯ ಜಾಮಿಯ ಸಅದಿಯ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.