ಮಂಗಳೂರು: ಅತ್ಯಂತ ಅವೈಜ್ಞಾನಿಕವಾಗಿರುವ ನಂತೂರು ವೃತ್ತದಲ್ಲಿ ಸಂಚಾರ ದಟ್ಟಣೆ ದಿನೇನೆ ಹೆಚ್ಚುತ್ತಿದ್ದು, ಉಷ್ಣಾಂಶ ಹೆಚ್ಚುತ್ತಿರುವ ಪ್ರಸ್ತುತ ದಿನಗಳಲ್ಲಿ ನಂತೂರಿನ ಸಂಚಾರ ದಟ್ಟಣೆಯಲ್ಲಿ ತಾಸುಗಟ್ಟಲೆ ಕಾದು ಕಾದು ಸುಸ್ತಾದ ಮಹಿಳೆಯೊಬ್ಬರ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಪ್ರಚಾರಗೊಂಡಿದೆ.
ಸ್ಥಳೀಯ ತುಳು ಭಾಷೆಯಲ್ಲಿನ ವೀಡಿಯೋದಲ್ಲಿ ” ಒಂಜಿ ರಿಕ್ವಸ್ಟ್, ಪದ್ಮರಾಜರೆ ವಿನ್ ಆವಡ್ ಅತ್ತ್ ಚೌಟರೇ ವಿನ್ ಆವಡ್ ನಿಕ್ಲೆಡ ಒಂಜಿ ಕೋರಿಕೆ ಎನ್ನ, ಎಂಕ್ ಬೋಡಾದ್ ಅತ್ತ್ ಇಡೀ ಕುಡ್ಲದ ಜನಕ್ಲೆಗ್ ಬೋಡಾದ್ ಈತೆ.. ನಟ್ಟುನು, ನಂತೂರ್ದ ಸಿಗ್ನಲ್ಡ್ ಪೋಯೆರಾಪುಜ್ಜಿ ಅಣ್ಣ. ಇಂಚನೇ ಪೋಯರಾಪುಜ್ಜಿ, ಕುಡಾ ನಂತೂರ್ದ ಸಿಗ್ನಲ್ಡ್ ಉಂತುಡ ಕರ್ಂಜಿದ್ ಪೋಪಣ್ಣ.. , ಎಂಚಾಂಡಲ ಮಳ್ತ್ ದ್.. ಫ್ಲೈ ಓವರ್ ಅಂತೂ ಮಲ್ಪೇರೆ ಆತಿಜ್ಜಿ, ಮುಳ್ತುದು ಕೈಕಂಬ ಮುಟ್ಟ ಒಂಜಿ ಶಾಮಿಯಾನ ಅತ್ಂದ ತಗಡ್ ಶೀಟ್ ಆಂಡಲಾ ಪಾಡ್ದ್ ಕೊರ್ಲೆ ಅಣ್ಣ ಮಸ್ತ್ ಉಪಕಾರಾವು ನಿಕ್ಲೇಡ್ದ್..” ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ
ನಂತೂರಿನ ಸಿಗ್ನಲಿನಲ್ಲಿ ಅಪಘಾತ, ಅಮಾಯಕರ ಬಲಿ ಸಾಮಾನ್ಯವಾಗಿದೆ. ಇಲ್ಲಿ ಓವರ್ ಪಾಸ್ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕೆಲಸ ಮಾಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷಕ್ಕೆ ಹತ್ತಾರು ಮಂದಿ ಇಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರ ಮೂರು ಪಟ್ಟು ಮಂದಿ ಗಾಯಗೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಇನ್ನೆಷ್ಟು ಜೀವ ಬಲಿಯಾಗಬೇಕು? ಎನ್ನುವ ಪ್ರಶ್ನೆ ಉದ್ಭವಿಸಿದೆ.
ನಗರದಲ್ಲಿ ಇಷ್ಟೊಂದು ರಸ್ತೆಗಳು ಸೇರುವ ಸ್ಥಳ ಬೇರಾವುದೂ ಇಲ್ಲ. ಎರಡು ರಾಷ್ಟ್ರೀಯ ಹೆದ್ದಾರಿ ಇಲ್ಲೇ ಹಾದು ಹೋಗುತ್ತಿದೆ. ಇದು ನಾಲ್ಕು ರಸ್ತೆಗಳ ಸಂಗಮ. ಈ ಸರ್ಕಲ್ ದಾಟಿ ಆರು ಕಡೆಗೆ ವಾಹನಗಳು ಹಾದು ಹೋಗುತ್ತಿವೆ. ಒಮ್ಮೆ ಸಿಗ್ನಲ್ ವ್ಯವಸ್ಥೆ ಅಳವಡಿಸಿದರೂ, ಅದು ಕಾರ್ಯಾಚರಿಸಲಿಲ್ಲ. ನಿತ್ಯವೂ ಗಂಟೆಗಟ್ಟಲೆ ವಾಹನ ದಟ್ಟಣೆ, ಅಪಘಾತ ಸಾಮಾನ್ಯ. ಇಲ್ಲಿ ಕೆಲಸ ಮಾಡುವ ಸಂಚಾರಿ ಪೊಲೀಸರು ವಾಹನಗಳನ್ನು ನಿಯಂತ್ರಿಸಲು ಹರಸಾಹಸ ಪಡುವ ದುಸ್ಥಿತಿ. ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಕುಳಿತಿದ್ದಾರೆ.
ಲಕ್ಷಾಂತರ ವಾಹನಗಳು ಸಾಗುವ ರಸ್ತೆ ಮಲ್ಲಿಕಟ್ಟೆ, ಪಂಪ್‌ವೆಲ್, ಬಿಕರ್ನಕಟ್ಟೆ ಹಾಗೂ ಕೆಪಿಟಿಯಿಂದ ಬರುವ ರಸ್ತೆಗಳು ನಂತೂರಿನಲ್ಲಿ ಸೇರುತ್ತವೆ. ಇಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಪಂಪ್‌ವೆಲ್ ಕಡೆಯಿಂದ ಬರುವ ವಾಹನಗಳು ಮಲ್ಲಿಕಟ್ಟೆಯಿಂದ ಬರುವ ರಸ್ತೆಗೆ ಸೇರಿ ಸಾಗಬೇಕು. ಕೆಪಿಟಿ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಪ್ರವೇಶಿಸುವ ವಾಹನಗಳು ಇದೇ ರಸ್ತೆಯಲ್ಲಿ ಎದುರಿನಿಂದ ಬರುತ್ತವೆ. ಬಿಕರ್ನಕಟ್ಟೆಯಿಂದ ನಗರಕ್ಕೆ ಬರುವ ವಾಹನಗಳು ಏಕಾಏಕಿ ನುಗ್ಗುತ್ತವೆ. ಇತ್ತ ಪಂಪ್‌ವೆಲ್ ಕಡೆಯಿಂದ ಬರುವ ವಾಹನಗಳು ಇಲ್ಲೇ ನುಗ್ಗುತ್ತವೆ. ನಗರದಿಂದ ಬಿಕರ್ನಕಟ್ಟೆಗೆ, ಪಂಪ್‌ವೆಲ್ ಕಡೆಗೆ ಹೋಗುವ ವಾಹನಗಳು ಇಲ್ಲೇ ಸಾಗಬೇಕು. ವಾಹನ ಚಾಲಕರು ಒಂದಷ್ಟು ಎಚ್ಚರ ತಪ್ಪಿದರೆ, ಅಪಘಾತ ಕಟ್ಟಿಟ್ಟ ಬುತ್ತಿ. ವೃತ್ತ ಇಳಿಜಾರು ಪ್ರದೇಶದಲ್ಲಿರುವುದರಿಂದ ವಾಹನ ಚಾಲಕರನ್ನು ಗೊಂದಲಕ್ಕೀಡು ಮಾಡುತ್ತದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ನಂತೂರು ವೃತ್ತದಿಂದ ಕೇವಲ 500 ಮೀ. ದೂರದಲ್ಲಿದೆ. ವೃತ್ತದಲ್ಲಿ ಸಾರ್ವಜನಿಕರು, ಪೊಲೀಸರು ಪಡುವ ಬವಣೆ ಅಧಿಕಾರಿಗಳಿಗೆ ಗಂಭೀರವಾಗಿ ಕಂಡಿಲ್ಲ. ಝೀರೋ ಟ್ರಾಫಿಕ್, ಪೊಲೀಸ್ ಬೆಂಗಾವಲಿನೊಂದಿಗೆ ಸಾಗುವ ಸಚಿವರು, ಸಂಸದರಿಗೆ ಇಲ್ಲಿನ ಕಷ್ಟ ಅರಿವಿಗೆ ಬರುತ್ತಿಲ್ಲ. ಬಂದಿದ್ದರೆ ದಿವ್ಯ ನಿರ್ಲಕ್ಷ್ಯವೆ ಹೊರತು ಇನ್ನೇನು ಅಲ್ಲ. ಗೊಂದಲದ ಸರ್ಕಲ್ ಆಗಿದ್ದರೂ ಸೀಮಿತ ಸಂಖ್ಯೆಯ ಟ್ರಾಫಿಕ್ ಸಿಬ್ಬಂದಿ ಕಾರ್ಯಾಚರಿಸುತ್ತಿರುತ್ತಾರೆ. ಬೆಳಗ್ಗೆ ಮತ್ತು ರಾತ್ರಿ ವೇಳೆ ಪೊಲೀಸರು ಇರುವುದಿಲ್ಲ. ಹಾಗಾಗಿ ಬೆಳಗ್ಗಿನ ವೇಳೆ ಹೆಚ್ಚಿನ ಅಪಘಾತಗಳು ಇಲ್ಲಿ ನಡೆದಿವೆ.
2013ರಿಂದ 2023ರ ತನಕ ನಂತೂರು ವೃತ್ತದಲ್ಲಿ ನಡೆದ ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. 80 ಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ನಂತೂರು ವೃತ್ತದಲ್ಲಿ ಅಪಘಾತ ಸಂಭವಿಸಿ ನಿರಂತರ ಅಮಾಯಕ ಜೀವ ಬಲಿಯಾಗುತ್ತಿರುವ ಅರಿವಿದ್ದರೂ, ಅದರ ನಿವಾರಣೆಗೆ ಬೇಕಾದ ಕ್ರಮ ಕೈಗೊಳ್ಳದಿರುವುದು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ವಾಹನಗಳು ಹೆಚ್ಚಾಗುತ್ತಿರುವುದರಿಂದ ಅಲ್ಲಿ ಓವರ್‌ಪಾಸ್ ನಿರ್ಮಾಣ ಮಾಡಲು ದಶಕದಿಂದ ಒತ್ತಾಯ ಮಾಡಲಾಗುತ್ತಿದೆ. ಆದರೆ ಇದುವರೆಗೆ ಸಮರ್ಪಕ ಸ್ಪಂದನೆ ದೊರಕಿಲ್ಲ.