ಕಾಸರಗೋಡು: ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ ಒಂದು ಹೆಚ್ಚುವರಿ ಸ್ಲಿಪ್ ಅನ್ನು ಮುದ್ರಿಸಿವೆ.
ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) ‘ಮನುಷ್ಯನ ಹಸ್ತಕ್ಷೇಪ’ ಇಲ್ಲದಿದ್ದರೆ ನಿಖರವಾದ ಫಲಿತಾಂಶಗಳನ್ನು ನೀಡುತ್ತವೆ ಎಂದು ಸುಪ್ರೀಂ ಕೋರ್ಟ್ ಹೇಳಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ವಿವಿಪ್ಯಾಟ್ ಲೋಪದ ಬಗ್ಗೆ ಕಾಂಗ್ರೆಸ್ ಮತ್ತು ಸಿಪಿಐ (ಎಂ) ಪ್ರಶ್ನೆ ಎತ್ತಿದ್ದು, ಚುನಾವಣಾ ಆಯೋಗದ ಅಧಿಕಾರಿಗಳು ದೋಷಗಳನ್ನು ಪರಿಶೀಲಿಸಿ ಯಂತ್ರಗಳನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.
ಎರಡೂ ಬಾರಿ ಪರಿಶೀಲಿಸಿದಾಗಲೂ ಮೂರು ವಿವಿ ಪ್ಯಾಟ್‌ಗಳು ಬಿಜೆಪಿ ಚಿಹ್ನೆಯಿರುವ ತಲಾ ಒಂದೊಂದು ಹೆಚ್ಚುವರಿ ಸ್ಲಿಪ್ ಮುದ್ರಿಸಿವೆ. ಕಾಂಗ್ರೆಸ್ ಅಭ್ಯರ್ಥಿ ರಾಜಮೋಹನ್ ಉನ್ನಿತಾನ್ ಅವರ ಚುನಾವಣಾ ಏಜೆಂಟ್ ನಾಸರ್ ಚೆರ್ಕಳಂ ಅವರ ಪ್ರಕಾರ, ಮೂರನೇ ಸುತ್ತಿನ ಪರಿಶೀಲನೆ ವೇಳೆ ಸಮಸ್ಯೆಯನ್ನು ಸರಿಪಡಿಸಲಾಗಿದೆ.
ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಇರಿಸಲಾಗಿರುವ ಇವಿಎಂಗಳಲ್ಲಿ ‘ನಾನ್ ಆಫ್ ದಿ ಎಬವ್’ (ನೋಟಾ) ಆಯ್ಕೆ ಸೇರಿದಂತೆ 10 ಅಭ್ಯರ್ಥಿಗಳ ಹೆಸರಿತ್ತು. ಒಟ್ಟು 10 ಟೆಸ್ಟ್ ವಿವಿಪ್ಯಾಟ್‌ಗಳ ಪೈಕಿ
ಮೂರು ವಿವಿ ಪ್ಯಾಟ್‌ಗಳು ‘ಟೆಸ್ಟ್ ಪ್ರಿಂಟ್’ಗಳನ್ನು ಮುದ್ರಿಸಿದ್ದವು. ಈ ಎಲ್ಲಾ ಮೂರು ಮುದ್ರಣಗಳ ಮೇಲೆ ಬಿಜೆಪಿಯ ಕಮಲದ ಚಿಹ್ನೆ ಇತ್ತು ಮತ್ತು ‘ಎಣಿಕೆ ಮಾಡಬಾರದು’ ಎಂದು ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿತ್ತು ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ವಿವಿಪ್ಯಾಟ್ ಎಂಬುವುದು ಇವಿಎಂಗೆ ಸಂಪರ್ಕಗೊಂಡಿರುವ ಯಂತ್ರವಾಗಿದ್ದು, ಒಬ್ಬ ವ್ಯಕ್ತಿಯು ಒಮ್ಮೆ ಮತ ಚಲಾಯಿಸಿದ ನಂತರ, ಕಾಗದದ ಟ್ರಯಲ್ ಅಥವಾ ಸ್ಲಿಪ್ ಮುದ್ರಣಗೊಳ್ಳುವ ಮೂಲಕ ವಿವಿಪ್ಯಾಟ್‌ನಲ್ಲಿನಲ್ಲಿ ಮತವೂ ದಾಖಲಾಗುತ್ತದೆ. ಸ್ಲಿಪ್‌ಗಳನ್ನು ಸಾಮಾನ್ಯವಾಗಿ ಮತದಾರರಿಗೆ ಹಸ್ತಾಂತರಿಸುವುದಿಲ್ಲ. ಆದರೆ, ಕೇವಲ ಏಳು ಸೆಕೆಂಡುಗಳ ಕಾಲ ಬೆಳಗುವ ಸಣ್ಣ ಮಸೂರದ ಮೂಲಕ ಅದನ್ನು ತೋರಿಸಲಾಗುತ್ತದೆ. ಅಣಕು ಮತದಾನದ ಸಮಯದಲ್ಲಿ, ಸ್ಲಿಪ್‌ಗಳನ್ನು ಮುದ್ರಿಸಲಾಗುತ್ತದೆ ಮತ್ತು ಏಜೆಂಟ್‌ಗಳು ಅವುಗಳನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಾರೆ.
‘ಎಣಿಕೆ ಮಾಡಬಾರದು’ ಎಂಬ ಬರಹದೊಂದಿಗೆ ಬಿಜೆಪಿಯ ಚಿಹ್ನೆ ಸಹಿತ ಮುದ್ರಿತವಾಗಿರುವ ಹೆಚ್ಚುವರಿ ಸ್ಲಿಪ್‌ಗಳು ಸ್ವಲ್ಪ ದೊಡ್ಡದಾಗಿ ಬಂದಿದ್ದರೂ, ನಿಜವಾದ ಚುನಾವಣೆಯ ಸಮಯದಲ್ಲಿ ಈ ಸ್ಲಿಪ್‌ಗಳು ತಪ್ಪಾಗಿ ಎಣಿಕೆಯಾಗುವ ಸಾಧ್ಯತೆಗಳಿವೆ ಎಂದು ದೂರುದಾರರು ವಾದಿಸಿದ್ದಾರೆ.
“ಟೆಸ್ಟ್ ಸ್ಲಿಪ್ ಸಾಮಾನ್ಯ ವಿವಿಪ್ಯಾಟ್ ಸ್ಲಿಪ್‌ಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿದೆ. ಬಿಜೆಪಿಯ ಚಹ್ನೆಯಲ್ಲಿ ಬಂದ ಸ್ಲಿಪ್‌ಗಳು ದೊಡ್ಡದಾಗಿಯೇ ಇತ್ತು. ಆದರೆ, ನನ್ನ ಪ್ರಶ್ನೆ, ಈ ಟೆಸ್ಟ್ ಸ್ಲಿಪ್ ಏಕೆ ಬರಬೇಕು? ಅದು ಕೂಡ ಬಿಜೆಪಿಯ ಚಿಹ್ನೆಯೊಂದಿಗೆ? ಸ್ಲಿಪ್‌ನಲ್ಲಿ ‘ಎಣಿಸಬಾರದು’ ಎಂದು ಬರೆದರೂ ಪದಗಳು ಚಿಕ್ಕ ಅಕ್ಷರ ಶೈಲಿಯಲ್ಲಿವೆ. ನಿಜವಾದ ಚುನಾವಣೆಯ ಸಮಯದಲ್ಲಿ ಇಂತಹ ಸ್ಲಿಪ್‌ಗಳು ಎಣಿಸಿದರೆ ಏನಾಗಬಹುದು?” ಎಂದು ಕಾಂಗ್ರೆಸ್ ಅಭ್ಯರ್ಥಿಯ ಏಜೆಂಟ್ ಜಮಾಲ್ ಪ್ರಶ್ನಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ತಿಳಿಸಿದೆ.
ಪರೀಶೀಲನೆಗೆ ಸುಪ್ರೀಂ ಕೋರ್ಟ್ ನಿರ್ದೇಶನ:
ಕಾಸರಗೋಡಿನಲ್ಲಿ ವಿವಿಪ್ಯಾಟ್ ಪರಿಶೀಲನೆ ವೇಳೆ ಬಿಜೆಪಿ ಚಿಹ್ನೆಯ ಸ್ಲಿಪ್ ಬಂದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಇವಿಎಂನಲ್ಲಿ ಚಲಾವಣೆಯಾದ ಎಲ್ಲಾ ಮತಗಳನ್ನು ವಿವಿಪ್ಯಾಟ್ ಸ್ಲಿಪ್‌ಗಳೊಂದಿಗೆ ತಾಳೆ ಮಾಡಿ ನೋಡುವಂತೆ ನಿರ್ದೇಶನ ನೀಡಲು ಕೋರಿ ಎಡಿಆರ್ ಮತ್ತು ಇತರರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಿಚಾರಣೆ ನಡೆಸುತ್ತಿದೆ. ಎಡಿಆರ್ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸುತ್ತಿದ್ದಾರೆ.
ಇಂದು (ಏ.18) ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ಅವರು ಕಾಸರಗೋಡಿನ ವಿಚಾರವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆ ಪೀಠ ಈ ಕುರಿತು ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ ಎಂದು ತಿಳಿದು ಬಂದಿದೆ.