ಬಿಲಾಸ್‌ಪುರ: ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಬಿಜೆಪಿ ಹೇಳುತ್ತಿರುವುದು ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅನುಮಾನ ಮೂಡಿಸಿದೆ ಎಂದು ಕಾಂಗ್ರೆಸ್ ಮುಖಂಡ ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.
ಬಿಲಾಸ್‌ಪುರ ಲೋಕಸಭಾ ಅಭ್ಯರ್ಥಿ ದೇವೇಂದ್ರ ಯಾದವ್ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಕನ್ಹಯ್ಯಾ ಕುಮಾರ್ ಮಾತನಾಡಿದರು.
2024ರ ಲೋಕಸಭೆ ಚುನಾವಣೆಯನ್ನು ಜನಾಂದೋಲನವಾಗಿ ರೂಪಿಸಿ ಸಂವಿಧಾನ ರಕ್ಷಣೆಗೆ ಮುಂದಾಗಬೇಕು ಎಂದ ಅವರು, ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಬಿಜೆಪಿ ಸಂವಿಧಾನ ಬದಲಾಯಿಸಲು ಮುಂದಾಗಿದೆ.
ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ 400 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಗೆ ಗೊತ್ತು? ಅವರು ಜ್ಯೋತಿಷಿಯೇ? ಇಂತಹ ಹೇಳಿಕೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೇಲೆ ಅನುಮಾನ ಮೂಡಿಸುತ್ತವೆ,’’ ಎಂದು ಕನಯ್ಯ ಹೇಳಿದರು
ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ನಾನು ಅನೇಕ ಜನರನ್ನು ಭೇಟಿ ಮಾಡಿದ್ದೇನೆ ಮತ್ತು ಅವರು ತಮ್ಮ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದರೂ ಬಿಜೆಪಿ ಗೆದ್ದಿದೆ ಎಂದು ಹೇಳಿದರು. ಮತಯಂತ್ರ ಸರಿ ಇದೆಯೋ ಇಲ್ಲವೋ ಎಂದು ಜನ ಕೇಳುತ್ತಾರೆ. ಇವಿಎಂಗಳ ವಿಶ್ವಾಸಾರ್ಹತೆಯನ್ನು ಅವರು ಪ್ರಶ್ನಿಸುತ್ತಿದ್ದಾರೆ ಎಂದೂ ಕನ್ಹಯ್ಯಾ ಹೇಳಿದ್ದಾರೆ.
ಒಂದೆಡೆ ಬಿಜೆಪಿ ಮತ ಕೇಳುತ್ತಿದ್ದರೆ ಮತ್ತೊಂದೆಡೆ 400ಕ್ಕೂ ಹೆಚ್ಚು ಸೀಟು ಗೆಲ್ಲುವುದಾಗಿ ಘೋಷಣೆ ಮಾಡುತ್ತಿದ್ದು, ವೋಟ್ ಕೇಳದೇ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದು ಅಧಿಕಾರದ ದುರಹಂಕಾರ ಮತ್ತು ದೇಶದ ನಾಗರಿಕರಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.