ಮಂಗಳೂರು, ಏಪ್ರಿಲ್.9: ಇಂದು ಸಂಜೆ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಏಪ್ರಿಲ್ 10 ಬುಧವಾರ ಈದುಲ್ ಫಿತರ್ ಹಬ್ಬ ಆಚರಿಸುವಂತೆ ಖಾಝಿಗಳು ಕರೆ ನೀಡಿದ್ದಾರೆ.
ರಂಝಾನ್ ತಿಂಗಳ 29ನೇ ದಿನವಾದ ಇಂದು ಸಂಜೆ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿರುವುದರಿಂದ ನಾಳೆ ಶವ್ವಾಲ್ ಪ್ರಥಮ ದಿನವಾಗಿದ್ದು ನಾಡಿನ ವಿಶ್ವಾಸಿಗಳು ಈದುಲ್ ಫಿತರ್ ಹಬ್ಬವನ್ನು ಆಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಗಳಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ ಬುಖಾರಿ ಮತ್ತು ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಹಾಗೂ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ಕರೆ ನೀಡಿದ್ದಾರೆ.
ಪವಿತ್ರ ರಮಳಾನ್ ಮುಸಲ್ಮಾನರ ಮಟ್ಟಿಗೆ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಕಠಿಣ ವೃತವನ್ನು ಆಚರಿಸಿ, ಅಲ್ಲಾಹನ ಇಷ್ಟ ದಾಸರ ಸಾಲಿನಲ್ಲಿ ಸೇರುವ ಉದ್ದೇಶದಿಂದ ಎಲ್ಲಾ ವಿಧ ಕೆಡುಕುಗಳಿಂದಲೂ ದೂರ ಸರಿದು ಹೆಚ್ಚೆಚ್ಚು ಒಳಿತನ್ನು ಮಾಡುತ್ತಾ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಶ್ರಮಿಸುತ್ತಾರೆ.
ರಮಳಾನ್ ತಿಂಗಳ ಕಡ್ಡಾಯ ವೃತವನ್ನು ಕೊನೆಗೊಳಿಸುವ ದಿನದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ರಮಳಾನ್ 29 ನೇ ಉಪವಾಸ ತೊರೆದ ಬಳಿಕ ಶವ್ವಾಲ್ ಚಂದ್ರ ದರ್ಶನವಾದಲ್ಲಿ ಮರುದಿನ ಈದ್ ಆಚರಿಸಲಾಗುತ್ತದೆ. ಚಂದ್ರ ದರ್ಶನವಾಗದಿದ್ದಲ್ಲಿ ರಮಳಾನ್ 30 ಪೂರ್ತೀಕರಿಸಿದ ನಂತರ ಈದ್ ಆಚರಿಸಲಾಗುತ್ತದೆ.
ಈದ್ ದಿನದಂದು ಯಾವೊಬ್ಬನೂ ಹಸಿವಿನಿಂದ ಇರಕೂಡದು ಎಂಬ ಉದ್ದೇಶದಿಂದ,ಆ ದಿನದಲ್ಲಿ ಫಿತರ್ ಝಕಾತ್ ಸಂಪ್ರದಾಯವನ್ನು ಕಡ್ಡಾಯಗೊಳಿಸಲಾಗಿದೆ. ಆಯಾ ಊರಿನಲ್ಲಿ ಸಾಮಾನ್ಯವಾಗಿ ಸೇವಿಸಲ್ಪಡುವ ಧಾನ್ಯಗಳನ್ನು ನಿರ್ದಿಷ್ಟ ಅಳತೆಯಲ್ಲಿ ಫಿತರ್ ಝಕಾತ್ ರೂಪದಲ್ಲಿ ನೀಡಬೇಕು.ಈದ್ ಎಂಬುದು ಪರಸ್ಪರ ಸ್ನೇಹ, ಸಹಬಾಳ್ವೆ ಸೌಹಾರ್ಧತೆಯನ್ನು ಸಾರುವ ಸಂಕೇತವಾಗಿದೆ.