ನವದೆಹಲಿ | ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಬ್ರಿವಾಲ್ ಬಂಧನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಂಧನ ರಾಜಕೀಯ ಷಡ್ಯಂತ್ರ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿಕೆ ನೀಡಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸದ್ಯ ದೆಹಲಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಜ್ರವಾಲ್ ನಿವಾಸದ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎಎಪಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದೆ.
ಕೇಜ್ರವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಕೆ; ಜೈಲಿನಿಂದಲೇ ಆಡಳಿತ ನಡೆಸಲಿದ್ದಾರೆ-ಎಎಪಿ
ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಮನೆಗೆ ಎಎಪಿ ಕಾನೂನು ತಂಡ ತಲುಪಿದೆ. ಇಂದು ರಾತ್ರಿ ತುರ್ತು ವಿಚಾರಣೆ ನಡೆಸುವಂತೆ ತಂಡ ಆಗ್ರಹಿಸಲಿದೆ. ಅರವಿಂದ್ ಕೇಜ್ರವಾಲ್ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಜೈಲಿನಿಂಲೇ ಆಡಳಿತ ನಡೆಸಲಿದ್ದಾರೆ ಎಂದು ಪಕ್ಷ ಹೇಳಿದೆ. ಬಿಜೆಪಿ ವಿರುದ್ಧ ಬರುತ್ತಿರುವ ವಿಚಾರಗಳಿಂದ ಗಮನ ಬೇರೆಡೆ ಸೆಳೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬಿಜೆಪಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪಕ್ಷ ಹೇಳಿದೆ.
ಎಎಪಿಎಂಎಲ್ಎ. ರಾಖಿ ಬಿರ್ಲಾಳನ್ನೂ ಇಡಿ ವಶಕ್ಕೆ ತೆಗೆದುಕೊಂಡಿದೆ. ಎಎಪಿ ಕಾರ್ಯಕರ್ತರನ್ನು ಬಂಧಿಸಿ ಹಲವು ಬಸ್‌ಗಳಲ್ಲಿ ಕರೆದೊಯ್ಯಲಾಗುತ್ತಿದೆ. ದೆಹಲಿಯಲ್ಲಿ ಬಿಗು ವಾತಾವರಣ ನಿರ್ಮಾಣಗೊಂಡಿದ್ದು, ಭಾರೀ ಭದ್ರತೆ ಒದಗಿಸಲಾಗಿದೆ.
ಬಧನ ವಿರುದ್ಧ ಒಗ್ಗಟ್ಟಿನ ಹೋರಾಟ- ‘ಇಂಡಿಯಾ ಮೈತ್ರಿ’
ಬಂಧನವನ್ನು ಒಗ್ಗಟ್ಟಿನಿಂದ ಎದುರಿಸುವುದಾಗಿ ‘ಇಂಡಿಯಾ’ ಮೈತ್ರಿ ಹೇಳಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ತೀವ್ರ ಪ್ರತಿಭಟನೆ ನಡೆಸುವಂತೆ ಪಿಸಿಸಿಗಳಿಗೆ ಸೂಚನೆ ನೀಡಲಾಗಿದೆ.
ಬಂಧನದ ವಿರುದ್ಧ ಪ್ರತಿಪಕ್ಷ ನಾಯಕರು ರಂಗಕ್ಕೆ
ಬಂಧನದ ವಿರುದ್ಧ ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ವಾಧಿಕಾರಿಯೊಬ್ಬರು ರಾಷ್ಟ್ರವನ್ನು ಕೊಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಸೋಲಿನ ಭೀತಿಯಿಂದ ಬಿಜೆಪಿ ಪ್ರತಿಪಕ್ಷಗಳನ್ನು ಬೇಟೆಯಾಡುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದರು. ಜನಾಕ್ರೋಶವನ್ನು ಎದುರಿಸಲು ಬಿಜೆಪಿ ಸಿದ್ಧವಾಗಲಿ. ಈ ಕ್ರಮವು ಇಂಡಿಯಾ ಮೈತ್ರಿಯ ಬಲವನ್ನು ಹೆಚ್ಚಿಸಲಿದೆ ಎಂದು ಸ್ಟಾಲಿನ್ ಹೇಳಿದರು. ಬಿಜೆಪಿ 400 ಸ್ಥಾನಗಳನ್ನೂ ಪಡೆಯುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ. ಭಾರತದಲ್ಲಿ ಪಾರದರ್ಶಕ ಚುನಾವಣೆ ನಡೆಸಲು ಹೇಗೆ ಸಾಧ್ಯ ಎಂದು ತೃಣಮೂಲ ಕಾಂಗ್ರೆಸ್ ಕೇಳಿದೆ. ಕೇಂದ್ರೀಯ ಸಂಸ್ಥೆಗಳು ಬಿಜೆಪಿಯ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಿಪಿಎಂ ಆರೋಪಿಸಿದೆ.