ರಿಯಾದ್: ಸೌದಿ ಅರೇಬಿಯಾ ಪ್ರಕಟಿಸಿದ “ಕಾನೂನು ಉಲ್ಲಂಘಕರಿಲ್ಲದ ದೇಶ” ಎಂಬ ರಾಷ್ಟ್ರೀಯ ಅಭಿಯಾನದ ಭಾಗವಾಗಿ ಒಟ್ಟು 11 ಲಕ್ಷ ವಿದೇಶಿ ನೌಕರರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.ಇದರಲ್ಲಿ 8.59 ಲಕ್ಷ ಜನರು ಇಖಾಮಾ ಕಾನೂನನ್ನು ಉಲ್ಲಂಘಿಸಿದವರಾಗಿದ್ದಾರೆ.
ಕಳೆದ ವರ್ಷ ನವೆಂಬರ್ 15 ರಿಂದ ದೇಶಾದ್ಯಂತ ಕಾನೂನು ಉಲ್ಲಂಘಕರಿಗಾಗಿ ಶೋಧನೆ ಆರಂಭವಾಯಿತು. ಆರು ತಿಂಗಳೊಳಗೆ 11.61 ಲಕ್ಷ ಉಲ್ಲಂಘನೆದಾರರನ್ನು ಬಂಧಿಸಲಾಗಿದೆ.
ಇದರಲ್ಲಿ 8.59 ಲಕ್ಷ ಇಖಾಮಾ ಉಲ್ಲಂಘನೆಗಾರರು ಮತ್ತು 2.07 ಲಕ್ಷ ಕಾರ್ಮಿಕ ಕಾನೂನು ಉಲ್ಲಂಘನೆ ಮಾಡಿದವರಾಗಿದ್ದಾರೆ.ಗಡಿ ಸುರಕ್ಷಾ ಕಾನೂನು ಉಲ್ಲಂಘಿಸಿದ 94,000 ವಿದೇಶೀಯರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗಡಿ ದಾಟಿದವರ ಪೈಕಿ 56 ಶೇಕಡಾ ಯೆಮೆನ್ ಮತ್ತು 41 ಶೇಕಡಾ ಇಥಿಯೋಪಿಯನ್ನರಾಗಿದ್ದಾರೆ. ಅಕ್ರಮವಾಗಿ ದೇಶದಿಂದ ಪಾಲಾಯಣಗೈಯ್ಯಲು ಪ್ರಯತ್ನಪಟ್ಟ 753 ಮಂದಿ ವಿದೇಶಿಯರನ್ನು ಆರು ತಿಂಗಳುಗಳಲ್ಲಿ ಬಂದಿಸಲಾಗಿದೆ. ಉಲ್ಲಂಘನೆಗಾರರಿಗೆ ಆಶ್ರಯ ನೀಡಿದ 379 ಕ್ಕಿಂತ ಹೆಚ್ಚು ಸ್ಥಳೀಯರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.ಇವರಲ್ಲಿ, 349 ಜನರನ್ನು ಶಿಕ್ಷಿಸಲಾಯಿತು.30 ಜನರ ವಿರುದ್ಧ ವಿಚಾರಣೆ ಮುಂದುವರಿದಿದೆ ಎಂದು ಭದ್ರತಾ ಇಲಾಖೆ ತಿಳಿಸಿದೆ.
ಕಸ್ಟಡಿಯಲ್ಲಿರುವ 1.65 ಲಕ್ಷ ವಲಸಿಗರನ್ನು ಬಿಡುಗಡೆ ಮಾಡುವ ಬಗ್ಗೆ ರಾಯಭಾರಿ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ. ಅಗತ್ಯವಿರುವ ದಾಖಲೆಗಳನ್ನು ಪೂರ್ಣಗೊಳಿಸಿದ ಸುಮಾರು 2 ಲಕ್ಷದ ಐದು ಸಾವಿರ ವಿದೇಶಿಯರು ವಿಮಾನ ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಮೂರು ತಿಂಗಳೊಳಗೆ 3 ಲಕ್ಷ ಉಲ್ಲಂಘಕರನ್ನು ಗಡೀಪಾರು ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.