janadhvani

Kannada Online News Paper

ಬಿಜೆಪಿ ಸರಕಾರ ಮುಸ್ಲಿಮರ ಮೇಲೆ ಎಸಗಿದ ಕೃತ್ಯದ ಬಗ್ಗೆ ಅಪಾರ ನೋವಿದೆ- ಡಿಸಿಎಂ ಡಿ.ಕೆ. ಶಿವಕುಮಾರ್

ನಿಮ್ಮೆಲ್ಲರ ಸಂಘಟನೆ, ಆಶೀರ್ವಾದದಿಂದ ನಮಗೆ ಶಕ್ತಿ ಬಂದಿದೆ. ನಾವು ರಾಜ್ಯದಲ್ಲಿ ಆಡಳಿತ ನಡೆಸುವಂತಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮಂಗಳೂರು: ಇದು ನಿಮ್ಮ ಸರಕಾರ. ಈ ಸರಕಾರ ನಿಮ್ಮ ಪರವಾಗಿ ನಿಂತುಕೊಂಡಿದೆ, ನಿಂತುಕೊಳ್ಳುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಮ್ಮ ಸರಕಾರ ಎಲ್ಲಾ ಜಾತಿ, ಎಲ್ಲ ಧರ್ಮಗಳನ್ನು ರಕ್ಷಣೆ ಮಾಡುವ ಸರಕಾರ. ಸಂವಿಧಾನವನ್ನು ಬಲಿಷ್ಠಗೊಳಿಸುವ ಸರಕಾರ ಎಂದು ಡಿಕೆಶಿ ಹೇಳಿದರು.
ನಗರದ ಹೊರವಲಯ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್‌ನಲ್ಲಿ ಬುಧವಾರ ನಡೆದ ‘ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ಎಸ್‌ವೈಎಸ್) ಇದರ 30ನೇ ವಾರ್ಷಿಕ ಮಹಾ ಸಮ್ಮೇಳನವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕೀಯ ಪಕ್ಷವೊಂದು ದೇಶದ ಜನರ ಭಾವನೆಯ ಮೇಲೆ ರಾಜಕಾರಣವನ್ನು ಮಾಡುತ್ತಿದೆ. ಆದರೆ ನಾವು ಜನಸಾಮಾನ್ಯರ ಬದುಕಿನಲ್ಲಿ ಬದಲಾವಣೆಯ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಹಾಗಾಗಿ ಭಾವನೆಗಳ ಮೂಲಕ ದೇಶವನ್ನು ಒಡೆಯುವ ಶಕ್ತಿಗಳನ್ನು ಹತ್ತಿಕ್ಕಿ ದೇಶವನ್ನು ರಕ್ಷಿಸುವ ಹೊಣೆಯನ್ನು ಜಾತ್ಯತೀತರಾದ ನಾವೆಲ್ಲ ಹೊತ್ತುಕೊಳ್ಳೋಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಹೇಳಿದರು.

ನಿಮ್ಮೆಲ್ಲರ ಸಂಘಟನೆ, ಆಶೀರ್ವಾದದಿಂದ ನಮಗೆ ಶಕ್ತಿ ಬಂದಿದೆ. ನಾವು ರಾಜ್ಯದಲ್ಲಿ ಆಡಳಿತ ನಡೆಸುವಂತಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಧರ್ಮ ಯಾವುದಾದರೂ ತತ್ವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು ಎಂಬುವುದನ್ನು ನಾವು ಒಪ್ಪಿಕೊಳ್ಳಬೇಕು. ಗಾಳಿ, ಸೂರ್ಯ, ಚಂದ್ರ, ನೀರಿಗೆ ಯಾವುದೇ ಜಾತಿ, ಧರ್ಮ ಬೇಧ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಾನವೀಯತೆಯೇ ಬದುಕುವ ಸಾರವಾಗಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಯುವಕರು ದೇಶದ ಆಸ್ತಿ. ಹಾಗಾಗಿ ಸಂಸ್ಕೃತಿ, ಧರ್ಮವನ್ನು ಕಾಪಾಡುವ ಜವಾಬ್ದಾರಿ ನಮ್ಮದಾಗಿದೆ. ಯಾರೂ ಕೂಡ ಧರ್ಮ, ಆಚಾರ- ವಿಚಾರದ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು. ರಾಜ್ಯದಲ್ಲಿ ಬಿಜೆಪಿ ಸರಕಾರ ಮುಸ್ಲಿಮರ ಮೇಲೆ ಎಸಗಿನ ಕೃತ್ಯದ ಬಗ್ಗೆ ಅಪಾರ ನೋವಿದೆ. ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಸ್ಲಿಮರಿಗೆ ರಕ್ಷಣೆ ನೀಡಲಿದೆ. ಸಮಸ್ಯೆಯನ್ನು ಬಗೆಹರಿಸಲಿದೆ. ಎಲ್ಲಾ ವರ್ಗದ ಜನರಿಗೂ ನ್ಯಾಯ ಕಲ್ಪಿಸಲು ಕಟಿಬದ್ದವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸಂವಿಧಾನವನ್ನು ಬದಲಾಯಿಸಲು ಬಿಡುವುದಿಲ್ಲ-ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಸುನ್ನಿ ಸಂಘಟನೆಗಳು ಒಳಿತಿನತ್ತ ಕೊಂಡೊಯ್ಯುವ ಸಂಘಟನೆಗಳಾಗಿವೆ. ಅಲ್ಲದೆ ದೇಶದ ಸಂವಿಧಾನಕ್ಕೆ ಅನುಗುಣವಾಗಿ ಕಾರ್ಯಾಚರಿಸುತ್ತಿವೆ. ದೇಶದ ಸಂವಿಧಾನವು ವಿದ್ವಾಂಸರಿಂದ, ಬುದ್ಧಿಜೀವಿಗಳಿಂದ ರಚಿಸಲ್ಪಟ್ಟಿವೆ. ಅದನ್ನು ಬದಲಾಯಿಸಲು ಯಾರಿಗೂ ಅಧಿಕಾರವಿಲ್ಲ. ಯಾವ ಕಾರಣಕ್ಕೂ ದೇಶದ ಸಂವಿಧಾನವನ್ನು ಬದಲಾಯಿಸಲು ನಾವು ಬಿಡುವುದಿಲ್ಲ ಎಂದು ಭಾರತದ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಆಯಾ ಸಮುದಾಯಗಳು ತಮ್ಮ ಆಶಯ- ಆದರ್ಶಗಳನ್ನು ಪಾಲಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿವೆ. ಸಂವಿಧಾನದ ಮೌಲ್ಯಕ್ಕೆ ಅಪಚಾರ ಎಸಗುವುದನ್ನು ಸಹಿಸಲು ಸಾಧ್ಯವಿಲ್ಲ. ಮುಸ್ಲಿಮರು ಭಯೋತ್ಪಾದಕರೋ, ಉಗ್ರರೋ ಅಲ್ಲ. ಕೋಮುವಾದಿಗಳೂ ಅಲ್ಲ. ಬದಲಾಗಿ ಶಾಂತಿಪ್ರಿಯರು. ದೇಶದ ಹಿತಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟವರು. ಈ ವೇದಿಕೆಯಲ್ಲಿ ಎಲ್ಲಾ ಸಮುದಾಯದ ಗಣ್ಯರು ಇರುವುದೇ ಅದಕ್ಕೆ ಸಾಕ್ಷಿಯಾಗಿದೆ ಎಂದು ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು.

ಸಮ್ಮೇಳನದಲ್ಲಿ ಮಂಡಿಸಲ್ಪಟ್ಟ ಠರಾವು

  • ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಹೇರಲಾದ ಹಿಜಾಬ್ ನಿಷೇಧ ವಾಪಸ್ ಪಡೆಯಬೇಕು.
  • ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ರಂಗದ ಮೀಸಲಾತಿಯನ್ನು ಶೇ.4ರಿಂದ 7ಕ್ಕೇರಿಸಬೇಕು.
  • ಕಳೆದ ಬಿಜೆಪಿ ಸರಕಾರವು 2ಬಿಯಡಿ ರೂಪಿಸಿದ ಶೇ.4ರ ಮೀಸಲಾತಿಯನ್ನು ವಾಪಸ್‌ ಪಡೆಯಬೇಕು.
  • 2015ರಲ್ಲಿ ರಚಿಸಲಾದ ಜಾತಿ ಜನಗಣತಿ ವರದಿಯನ್ನು ಬಿಡುಗಡೆಗೊಳಿಸಬೇಕು.
  • ಮಂಗಳೂರು ಗೋಲಿಬಾರ್‌ನಿಂದ ಮೃತಪಟ್ಟ ಎರಡು ಕುಟುಂಬಕ್ಕೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಮತ್ತು ನೂರಾರು ಅಮಾಯಕರ ಮೇಲೆ ಹೂಡಿದ ಸುಳ್ಳು ಪ್ರಕರಣವನ್ನು ವಾಪಸ್‌ ಪಡೆಯಬೇಕು.
  • ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆ ಪ್ರಕರಣದ ಅಮಾಯಕರನ್ನು ಬಿಡುಗಡೆಗೊಳಿಸಬೇಕು.
  • ಬಿಜೆಪಿ ಸರಕಾರವು ಬಾಬಾಬುಡನ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯವಾಗಿ ರಚಿಸಿದ ಸಮಿತಿಯನ್ನು ರದ್ದುಪಡಿಸಿ ಪುನಃ ರಚಿಸಬೇಕು.
  • ಮುಂದಿನ ಬಜೆಟ್‌ನಲ್ಲಿ ಒಟ್ಟು ಅನುದಾನದ ಶೇ.10ರಷ್ಟನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು.

ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಝನುಲ್ ಉಲಮಾ ಮಾಣಿ ಉಸ್ತಾದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಬಿ.ಎಂ. ಮುಮಾಝ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ವೈಎಸ್‌ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ.ಎಂ. ಶಾಫಿ ಸಅದಿ ಬೆಂಗಳೂರು ಠರಾವು ಮಂಡಿಸಿದರು. ಸ್ವಾಗತ ಸಮಿತಿಯ ಮುಖ್ಯ ಸಂಯೋಜಕ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ಮತ್ತು ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕರ್ನಾಟಕ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್, ಸಯ್ಯಿದ್ ಕೂರತ್ ತಂಙಳ್ , ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಾ. ಹಝ್ರತ್ ಫಾಝಿಲ್ ರಝ್ವಿ ಕಾವಲಕಟ್ಟೆ, ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ರಾಜ್ಯ ಹಜ್ ಸಚಿವ ರಹೀಂ ಖಾನ್, ಶಾಸಕರಾದ ಬಿ.ಎಂ. ಫಾರೂಕ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಯೆನೆಪೊಯ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲಾ ಕುಞ್ಞಿ , ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆಎಸ್‌ ಮುಹಮ್ಮದ್ ಮಸೂದ್, , ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾ‌ರ್ ಅಲಿ, ಐವನ್ ಡಿಸೋಜ, ಕೇರಳದ ಶಾಸಕ ರೋಝಿ ಜಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ ಮುಲ್ಕಿ ಮಿಥುನ್ ರೈ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ, ಕಣಚೂರು ಮೋನು, ಇಸ್ಮಾಯಿಲ್ ತಂಙಳ್ ಉಜಿರೆ, ಅಬೂಸ್ವಾಲಿಹ್ ಉಸ್ತಾದ್ ಕಿಲ್ಲೂರು, ಜಿಎಂ ಕಾಮಿಲ್ ಸಖಾಫಿ, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಅಬೂಸುಫ್ಯಾನ್ ಮದನಿ, ಸೈಯದ್ ಪೆರುವಾಯಿ ತಂಙಳ್, ಸುಫಿಯಾನ್ ಸಖಾಫಿ, ಹೈದ್ರೋಸ್ ತಂಙಳ್ ಕೊಡಗು, ಎಪಿಎಸ್ ತಂಙಳ್ ಚಿಕ್ಕಮಗಳೂರು, ಸೈಯದ್ ಅಶ್ರಫ್ ತಂಙಳ್ ಆದೂರು, ಜಲಾಲ್ ತಂಙಳ್ ಪೊಸೋಟ್, ಶಿಹಾಬ್ ತಂಙಳ್ ತಲಕ್ಕಿ, ಮುಹಿಯ್ಯುದ್ದೀನ್‌ ಸಖಾಫಿ ತೋಕೆ, ನ್ಯಾಷನಲ್‌ ಅಬ್ದುಲ್ ರಹ್ಮಾನ್ ತೀರ್ಥಹಳ್ಳಿ, ಎಸ್.ಎಂ. ರಶೀದ್ ಹಾಜಿ, ರಕ್ಷಿತ್ ಶಿವರಾಂ, ಕೆ.ಕೆ. ಶಾಹುಲ್ ಹಮೀದ್ ಮತ್ತಿತರರು ಭಾಗವಹಿಸಿದ್ದರು.

ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶಕೀ‌ರ್ ಹೈಸಮ್, ಹಾಫಿಳ್ ಯಾಕೂಬ್ ಸಅದಿ ನಾವೂರು, ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ್ಯ ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಎಸ್‌ಪಿ ಹಂಝ ಸಖಾಫಿ ಬಂಟ್ವಾಳ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಬಿ ಮುಹಮ್ಮದ್ ಸಾದಿಕ್ ಮಲೆಬೆಟ್ಟು, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಅಬ್ದುಲ್ಲಾ ಹಾಜಿ ನಾವುಂದ, ಎಸ್‌ಕೆ ಖಾದರ್ ಹಾಜಿ ಮುಡಿಪು, ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಹಸೈನಾ‌ರ್ ಆನೆಮಹಲ್, ಅಶ್ರಫ್ ಕಿನಾರ ಮತ್ತಿತರರು ಉಪಸ್ಥಿತರಿದ್ದರು.

  • ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 30 ಕೃತಿಗಳನ್ನು ಯೆನೆಪೊಯ ವಿವಿ ಕುಲಾಧಿಪತಿ ವೈ. ಯೆನೆಪೊಯ ಅಬ್ದುಲ್ಲಾ ಕುಂಣಿ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
  • ದೇರಳಕಟ್ಟೆಯಲ್ಲಿ 10 ಕೋ.ರೂ. ವೆಚ್ಚದಲ್ಲಿ ಎಸ್‌ವೈಎಸ್‌ ವತಿಯಿಂದ ನಿರ್ಮಿಸಲಾಗುವ ‘ಸಾಂತ್ವನ’ ಕೇಂದ್ರದ ಬ್ರೋಷ‌ರ್ ಬಿಡುಗಡೆಗೊಳಿಸಲಾಯಿತು.
  • ಚಿಂತಕ, ಸಾಮಾಜಿಕ ಹೋರಾಟಗಾರ ನಿಖಿತ್ ರಾಜ್ ಮೌರ್ಯ ‘ಭಾರತೀಯ ಪರಂಪರೆ’ಯ ಕುರಿತು ಮಾತನಾಡಿದರು.
  • ‘ಪರಂಪರೆಯ ಪ್ರತಿನಿಧಿಗಳಾಗೋಣ’ ಎಂಬ ಧೈಯವಾಕ್ಯದಡಿ ನಡೆದ ಸಮ್ಮೇಳನದ ಪೂರ್ವಭಾವಿಯಾಗಿ ನಗರದ ಪಡೀಲ್‌ನಿಂದ ಅಡ್ಯಾ‌ರ್ ಗಾರ್ಡನ್‌ವರೆಗೆ ಆಕರ್ಷಕ ರ್ಯಾಲಿ ನಡೆಯಿತು.

error: Content is protected !! Not allowed copy content from janadhvani.com