ನವದೆಹಲಿ: 2002ರ ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬದ ಸದಸ್ಯರ ಹತ್ಯೆ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡುವ ಗುಜರಾತ್ ಸರಕಾರದ ಆದೇಶವನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ.
ಗುಜರಾತ್ ಸರ್ಕಾರ ಆರೋಪಿಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಗಳ ಶಿಕ್ಷೆ ಕಡಿತಗೊಳಿಸಿ ಅವರನ್ನು ಬಿಡುಗಡೆಗೊಳಿಸುವ ಹಕ್ಕು ಗುಜರಾತ್ ಸರ್ಕಾರಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರಿಂದಾಗಿ ಎಲ್ಲ 11 ಅಪರಾಧಿಗಳು ಮತ್ತೆ ಜೈಲಿಗೆ ಹೋಗಬೇಕಾಗಿದೆ.
2022ರ ಸ್ವಾತಂತ್ರ್ಯ ದಿನದಂದು ಗುಜರಾತ್ ಸರ್ಕಾರವು ಅಪರಾಧಿಗಳನ್ನು ಬಿಡುಗಡೆ ಮಾಡಿದೆ. ಆರೋಪಿಗಳಾದ ಜಸ್ವಂತ್ ನಾಯ್, ಗೋವಿಂದ್ ನಾಯ್, ಶೈಲೇಶ್ ಭಟ್, ರಾಧೇಶಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯ್ ವೋಹಾನಿಯಾ, ರಾಜುಭಾಯ್ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದು ಪ್ರತಿಪಕ್ಷಗಳು, ಮತ್ತು ನಾಗರಿಕ ಸಮಾಜದಿಂದ ಖಂಡನೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.
ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳಿಗೆ ಅದ್ದೂರಿ ಸ್ವಾಗತ ಮಾಡಲಾಗಿತ್ತು. ಆ ಬಳಿಕ ಆರೋಪಿಗಳು ಬಿಜೆಪಿ ಸಂಸದ ಮತ್ತು ಶಾಸಕರೊಂದಿಗೆ ವೇದಿಕೆ ಹಂಚಿಕೊಂಡಿರುವುದು ಕೂಡ ಕಂಡುಬಂದಿದೆ. ಅಪರಾಧಿಗಳಲ್ಲಿ ಒಬ್ಬರಾದ ರಾಧೇಶ್ಯಾಮ್ ಶಾ ಅವರು ವಕೀಲಿ ವೃತ್ತಿಯನ್ನು ಪ್ರಾರಂಭಿಸಿದ್ದರು. ಇದನ್ನು ಸುಪ್ರೀಂಕೋರ್ಟ್‌ನ ಗಮನಕ್ಕೆ ತರಲಾಗಿತ್ತು.
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಸದಸ್ಯರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಿಲ್ಕಿಸ್ ಬಾನು, ತೃಣಮೂಲ ಕಾಂಗ್ರೆಸ್ ಪಕ್ಷದ ಮಹುವಾ ಮೊಯಿತ್ರಾ, ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯೆ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲೌಲ್ ಹಾಗೂ ಲಕ್ನೋ ವಿವಿಯ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಸಹಿತ ಹಲವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ 11 ದಿನಗಳ ಕಾಲ ಅರ್ಜಿ ವಿಚಾರಣೆ ನಡೆಸಿದ್ದು, ಅಕ್ಟೋಬರ್‌ನಲ್ಲಿ ತೀರ್ಪು ಕಾಯ್ದಿರಿಸಿತ್ತು.
1992ರ ಶಿಕ್ಷೆ ಕಡಿತ ನೀತಿಯಾನುಸಾರ ಗುಜರಾತ್ ಸರ್ಕಾರ ಅಪರಾಧಿಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಈ ಕಾನೂನಿನ ಸ್ಥಾನದಲ್ಲಿ 2014ರಲ್ಲಿ ಜಾರಿಗೊಳಿಸಲಾದ ಕಾನೂನಿನ ಪ್ರಕಾರ ದೊಡ್ಡ ಶಿಕ್ಷೆ ಎದುರಿಸುವ ಪ್ರಕರಣಗಳಲ್ಲಿ ಶಿಕ್ಷೆ ಕಡಿತಗೊಳಿಸುವುದನ್ನು ನಿಷೇಧಿಸಲಾಗಿದೆ.
1992ರ ನೀತಿಯ ಪ್ರಕಾರ ಕ್ಷಮಾಧಾನ ನಿರ್ಧರಿಸಲು ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿದ ಮೇ 13, 2022ರ ಸುಪ್ರೀಂಕೋರ್ಟ್ ಆದೇಶವನ್ನು ಸತ್ಯಗಳನ್ನು ಮರೆಮಾಚುವ ಮೂಲಕ ಪಡೆಯಲಾಗಿದೆ ಎಂದು ಪೀಠವು ಹೇಳಿದೆ. ಬಿಲ್ಕಿಸ್ ಬಾನು ಪ್ರಕರಣವನ್ನು ಮುಕ್ತ ಮತ್ತು ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಯಿತು. ಆದ್ದರಿಂದ ಮಹಾರಾಷ್ಟ್ರ ಸರ್ಕಾರ ಮಾತ್ರವೇ ಹೊರತು ಗುಜರಾತ್ ಸರ್ಕಾರವು ಕ್ಷಮಾಧಾನ ನೀಡಲು ಅರ್ಹತೆ ಹೊಂದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. 2004ರಲ್ಲಿ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮುಂಬೈಗೆ ವರ್ಗಾಯಿಸಲಾಗಿತ್ತು.
ಜೈಲಿನಲ್ಲಿ 14 ವರ್ಷಗಳನ್ನು ಪೂರ್ಣಗೊಳಿಸಿದ ಕಾರಣ ಮತ್ತು ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿನ ನಡವಳಿಕೆ ಮುಂತಾದ ಅಂಶಗಳಿಂದಾಗಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ರಾಜ್ ಕುಮಾರ್ ಹೇಳಿದ್ದರು.