ಕೋಝಿಕ್ಕೋಡ್: ವಿವಾದಾತ್ಮಕ ಹೇಳಿಕೆಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಸಮಸ್ತ ಜಂಟಿ ಕಾರ್ಯದರ್ಶಿ ಉಮರ್ ಫೈಝಿ ಮುಕ್ಕಂ ಪ್ರತಿಕ್ರಿಯಿಸಿದ್ದಾರೆ. ತಲೆಗೆ ಶಾಲು ಹಾಕದ ಮಹಿಳೆಯರೆಲ್ಲರೂ ಸ್ವಚ್ಛಂದವಾಗಿ ವರ್ತಿಸುತ್ತಾರೆ ಎಂದು ಹೇಳಿಲ್ಲ ಎಂದು ಉಮರ್ ಫೈಝಿ ಮುಕ್ಕಂ ಹೇಳಿದರು.
ಈ ಹಿಂದೆ ಪೊಲೀಸ್ ಠಾಣೆಯಿಂದ ಕರೆ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನಂತರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದೂ ತಿಳಿಸಲಾಗಿತ್ತು. ಎರಡು ತಿಂಗಳ ಬಳಿಕ ಈಗ ಯಾಕೆ ಕೇಸ್ ತೆಗೆದುಕೊಂಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಉಮರ್ ಫೈಝಿ ಮುಕ್ಕಂ ಹೇಳಿದರು.
ಇದೀಗ ಉಮರ್ ಫೈಝಿ ವಿರುದ್ಧ ಪ್ರಕರಣ ದಾಖಲಾಗಿದೆ. ‘ನಿಸಾ’ ಅಧ್ಯಕ್ಷೆ ಹಾಗೂ ಸಮಾಜ ಸೇವಕಿ ವಿ.ಪಿ.ಝೊಹರಾ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉಮರ್ ಫೈಝಿ ಅವರು ಮುಸ್ಲಿಂ ಮಹಿಳೆಯರು ತಲೆಗೆ ಶಾಲು ಹಾಕದೆ ಸ್ವಚ್ಛಂದವಾಗಿ ವರ್ತಿಸಲು ಸಮ್ಮತಿಸಲಾದು ಎಂಬ ಮಾತು ಬಹಳ ವಿವಾದಕ್ಕೀಡಾಗಿತ್ತು. ಈ ಹೇಳಿಕೆ ವಿರುದ್ಧ ಝೊಹರಾ ಪೊಲೀಸ್ ದೂರು ದಾಖಲಿಸಿದ್ದಾರೆ. ಉಮರ್ ಫೈಝಿ ವಿರುದ್ಧ ಕೋಝಿಕ್ಕೋಡ್ ನಡಕಾವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಮರ್ ಫೈಝಿ ಧಾರ್ಮಿಕ ಘರ್ಷಣೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಐಪಿಸಿ 295ಎ ಮತ್ತು 298 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹೇಳಿಕೆ ವಿರುದ್ಧ ಭಾರೀ ಪ್ರತಿಭಟನೆ ನಡೆದಿದೆ. ಕುಟುಂಬಶ್ರೀಯ ‘ಬ್ಯಾಕ್ ಟು ಸ್ಕೂಲ್’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಝೊಹರಾ ಶಾಲು ತೆಗೆದು ಪ್ರತಿಭಟನೆ ನಡೆಸಿದ್ದು ಕೂಡ ಭಾರೀ ಸುದ್ದಿಯಾಗಿತ್ತು.