ರಿಯಾದ್: ಸೌದಿ ಅರೇಬಿಯಾದಲ್ಲಿ ಸೇಲ್ಸ್, ಪರ್ಚೇಸಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಉದ್ಯೋಗಗಳ ದೇಶೀಕರಣ ಜಾರಿಗೆ ಬಂದಿದೆ ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ. ಇದಕ್ಕೆ ನಿಗದಿಪಡಿಸಲಾಗಿದ್ದ ಗಡುವು ಭಾನುವಾರ ಕೊನೆಗೊಂಡಿದೆ. ಅಂದಿನಿಂದ ಈ ನಿರ್ಧಾರ ಜಾರಿಗೆ ಬಂದಿದ್ದು, ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಸೇಲ್ಸ್ ಹುದ್ದೆಗಳ ಸ್ವದೇಶೀಕರಣವನ್ನು ಶೇಕಡಾ 15 ರಷ್ಟು ಹೆಚ್ಚಿಸುವುದು ಹೊಸ ಕ್ರಮವಾಗಿದೆ. ಸೇಲ್ಸ್ ಮ್ಯಾನೇಜರ್, ರಿಟೇಲ್ ಸೇಲ್ಸ್ ಮ್ಯಾನೇಜರ್, ಸೇಲ್ಸ್ ಸ್ಪೆಷಲಿಸ್ಟ್, ಹೋಲ್ಸೇಲ್ ಸೇಲ್ಸ್ ಮ್ಯಾನೇಜರ್, ಐಟಿ ಉಪಕರಣಗಳ ಮಾರಾಟ ತಜ್ಞ ಮತ್ತು ಮಾರಾಟ ಪ್ರತಿನಿಧಿ ಉದ್ಯೋಗಗಳು ಸ್ವದೇಶೀಕರಣದಲ್ಲಿ ಸೇರಿವೆ. ಈ ನಿರ್ಧಾರವು ಮಾರಾಟ ವಲಯದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ.
Procurement( ಸಂಗ್ರಹಣೆ) ಹುದ್ದೆಗಳಿಗೆ ಶೇ 50 ರಷ್ಟು ಸ್ವದೇಶೀಕರಣಗೊಳ್ಳಲಿದೆ. ಪರ್ಚೇಸಿಂಗ್ ಮ್ಯಾನೇಜರ್, ಪರ್ಚೇಸಿಂಗ್ ರೆಪ್ರೆಸೆಂಟೇಟಿವ್, ಕಾಂಟ್ರಾಕ್ಟ್ ಮ್ಯಾನೇಜರ್, ಟೆಂಡರ್ ಸ್ಪೆಷಲಿಸ್ಟ್ ಮತ್ತು ಪರ್ಚೇಸಿಂಗ್ ಸ್ಪೆಷಲಿಸ್ಟ್ ಮುಂತಾದ ಪ್ರಮುಖ ಉದ್ಯೋಗಗಳು ಸ್ವದೇಶಿಕರಣದಲ್ಲಿ ಒಳಗೊಳ್ಳುತ್ತವೆ. ಮೂರು ಅಥವಾ ಹೆಚ್ಚಿನ ಉದ್ಯೋಗಿಗಳು ಸಂಗ್ರಹಣೆಯ ಉದ್ಯೋಗಗಳಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ನಿರ್ಧಾರವು ಅನ್ವಯಿಸುತ್ತದೆ.
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಉದ್ಯೋಗಗಳನ್ನು ಮೊದಲ ಹಂತವಾಗಿ ಶೇ.35 ರಷ್ಟು ಸ್ಥಳೀಯಗೊಳಿಸಲಾಗುತ್ತದೆ. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮ್ಯಾನೇಜರ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಸ್ಪೆಷಲಿಸ್ಟ್, ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಆಫೀಸ್ ಸ್ಪೆಷಲಿಸ್ಟ್, ಕಮ್ಯುನಿಕೇಷನ್ಸ್ ಪ್ರಾಜೆಕ್ಟ್ ಮ್ಯಾನೇಜರ್, ಬಿಸಿನೆಸ್ ಸರ್ವಿಸ್ ಪ್ರಾಜೆಕ್ಟ್ ಮ್ಯಾನೇಜರ್ ಇವು ದೇಶೀಕರಣಗೊಂಡಿರುವ ಮುಖ್ಯ ಉದ್ಯೋಗಗಳಾಗಿವೆ. ಮುಂದಿನ ಹಂತದಲ್ಲಿ ಅದನ್ನು ಶೇ.40ಕ್ಕೆ ಹೆಚ್ಚಿಸಲಾಗುವುದು. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಮೂರು ಅಥವಾ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಿಗೆ ನಿರ್ಧಾರವು ಅನ್ವಯಿಸುತ್ತದೆ.
ಸೇಲ್ಸ್, ಪರ್ಚೇಸಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಉದ್ಯೋಗಗಳಲ್ಲಿ ಸ್ವದೇಶೀಕರಣಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ವಿವರಿಸುವ ಮಾರ್ಗದರ್ಶಿಯನ್ನು ಸಚಿವಾಲಯವು ಬಿಡುಗಡೆ ಮಾಡಿದೆ. ನಿರ್ಧಾರವನ್ನು ಅನುಸರಿಸದ ಸಂಸ್ಥೆಗಳ ವಿರುದ್ಧ ದಂಡನಾತ್ಮಕ ಕ್ರಮಗಳು ಇರುತ್ತವೆ. ಈ ವರ್ಷದ ಏಪ್ರಿಲ್‌ನಲ್ಲಿ, ಮಾರಾಟ, ಖರೀದಿ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಉದ್ಯೋಗಗಳ ಸ್ವದೇಶೀಕರಣದ ಕುರಿತು ಸಚಿವಾಲಯವು ಘೋಷಣೆ ಮಾಡಿತ್ತು. ಇವುಗಳನ್ನು ಹಂತಹಂತವಾಗಿ ಜಾರಿಗೊಳಿಸಲಾಗುವುದು ಎಂದು ನಂತರ ಸ್ಪಷ್ಟಪಡಿಸಲಾಗಿತ್ತು.