janadhvani

Kannada Online News Paper

ತಪ್ಪು ಅರ್ಥ ಬರುವಂತೆ ವೀಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸಿಟಿ ರವಿ ಮತ್ತು ಅಶ್ವತ್ಥ ನಾರಾಯಣ- ಸಿಎಂ ಗರಂ

ಸಿಟಿ ರವಿ ಮತ್ತು ಅವರ ಪಕ್ಷ ಇಂಥಾ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ಅವರನ್ನು ಮನೆಯಲ್ಲಿ‌ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ.

ಬೆಂಗಳೂರು: ವಿಧಾನ ಸಭೆಯಲ್ಲಿ ರೈತರ ಸಾಲ ಮನ್ನಾ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ಸರಕಾರದ ಅವಧಿಯಲ್ಲಿ ಸನ್ಮಾನ್ಯ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ “ಸಾಲ ಮನ್ನಾ ಮಾಡಲು ನಮ್ಮಲ್ಲಿ ನೋಟ್ ಮುದ್ರಿಸುವ ಯಂತ್ರವಿಲ್ಲ, ಚುನಾವಣೆ ವೇಳೆ ನೀಡಿದ ಭರವಸೆಗಳನ್ನೆಲ್ಲ ಈಡೇರಿಸಲು ಸಾಧ್ಯವೇ?” ಎಂಬ ಮಾತನ್ನು ಉಲ್ಲೇಖಿಸಿದ್ದು, ಅದನ್ನು ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಎಂಬಂತೆ ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಾರ್ವಜನಿಕಾವಾಗಿ ಬೆತ್ತಲಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸಭೆಯಲ್ಲಿ ಹೇಳಿದ ವೀಡಿಯೋವನ್ನು ತಪ್ಪು ಅರ್ಥ ಬರುವಂತೆ ಬೇಕಾದಷ್ಟು ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕರಾದ ಸಿಟಿ ರವಿ ಹಾಗೂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತ ಪೂರ್ತಿ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ, ಸಿಟಿ ರವಿ ಮತ್ತು ಅವರ ಪಕ್ಷ ಇಂಥಾ ಅಗ್ಗದ ಚೇಷ್ಠೆಗಳನ್ನು ಮಾಡಿದ್ದರ ಫಲವೇ ಇಂದು ಜನ ಅವರನ್ನು ಮನೆಯಲ್ಲಿ‌ ಮತ್ತು ಪಕ್ಷವನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ.ಆದರೂ ನಿಮಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ ಎಂದಿದ್ದಾರೆ.
ಹಾಲಿ ಶಾಸಕರಾಗಿರುವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಸದನದಲ್ಲಿ ಕೂತು ಅಭಿವೃದ್ಧಿ ಕಾರ್ಯಗಳ ಬಗೆಗಿನ ಚರ್ಚೆಯಲ್ಲಿ ಪಾಲ್ಗೊಳ್ಳಬೇಕಿತ್ತು, ಆದರೆ ಅವರ ಗಮನವೆಲ್ಲ ವಿರೋಧ ಪಕ್ಷದ ನಾಯಕನ ಕುರ್ಚಿಯ ಮೇಲೆ ಇದೆಯೆಂದು ಕಾಣುತ್ತೆ ಎಂದಿರುವ ಮುಖ್ಯಮಂತ್ರಿ, ನಿಮ್ಮ ಮಾನ ಮರ್ಯಾದೆ ಬಗ್ಗೆ ನಿಮಗೆ ಕನಿಷ್ಠ ಕಾಳಜಿ ಇದ್ದರೆ ಶೇರ್ ಮಾಡಿರುವ ವೀಡಿಯೋ ಡಿಲೀಟ್ ಮಾಡಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.


ಬಿಜೆಪಿ ನಾಯಕರ ಇಂತಹ ನಡವಳಿಕೆಗಳು ಬಿಜೆಪಿ ಎಂದರೆ “ಬೊಗಳೆ ಜನತಾ ಪಾರ್ಟಿ” ಎಂಬ ಕುಖ್ಯಾತಿಯನ್ನು ದೃಡೀಕರಿಸುವಂತಿದೆ. ಫೇಕ್ ನ್ಯೂಸ್ ಗಳ ಸೃಷ್ಟಿ ಮತ್ತು ಪ್ರಸಾರವನ್ನೇ ನಂಬಿ ರಾಜಕಾರಣ ಮಾಡುವ ಬಿಜೆಪಿಯವರಿಗೆ ನನ್ನ ವಚನ ಬದ್ಧತೆಯನ್ನು ಪ್ರಶ್ನಿಸುವ ನೈತಿಕತೆಯೇ ಇಲ್ಲ. ನರೇಂದ್ರ ಮೋದಿ ಅವರು ಮೌಲ್ಯಾಧಾರಿತ ರಾಜಕಾರಣ ಮತ್ತು ಸತ್ಯದ ಪರವಾಗಿದ್ದರೆ ಈ ಕೂಡಲೇ “ಫೇಕ್ ನ್ಯೂಸ್ ಪೆಡ್ಲರ್” ಗಳಾದ ಸಿಟಿ ರವಿ ಮತ್ತು ಅಶ್ವತ್ಥ ನಾರಾಯಣ ಅವರನ್ನು ಪಕ್ಷದಿಂದ ಆಚೆಗಟ್ಟಲಿ ಎಂದು ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಯ ಪ್ರತಿಕ್ರಿಯೆ ಬಂದ ನಂತರ ಸಾರ್ವಜನಿಕವಾಗಿ ಬೆತ್ತಲೆಗೊಂಡ ಬಿಜೆಪಿಯ ಈರ್ವರು ಮಹಾ ನಾಯಕರು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಕುರಿತು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಬಿಜೆಪಿಗರು ಇಂದು ಬೆಳಿಗ್ಗೆಯಿಂದ ಮೂರ್ನಾಲ್ಕು ಸುಳ್ಳುಗಳನ್ನು ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೆಗಳಲ್ಲಿ ಹಂಚಿ ಡಿಲೀಟ್ ಮಾಡಿದ್ದಾರೆ. ಇನ್ನು ಅನಧಿಕೃತ ಖಾತೆಗಳಲ್ಲಿ ಸುಳ್ಳಿನ ಹೊಳೆಯನ್ನೇ ಹರಿಸುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದೆ.

error: Content is protected !! Not allowed copy content from janadhvani.com