ಜೆರುಸಲೇಂ: ಗಾಜಾದಲ್ಲಿ ಇಸ್ರೇಲ್ ಸೇನೆಯು ಅಮಾಯಕರ ಹತ್ಯೆಯನ್ನು ಮುಂದುವರಿದಿದೆ. ಈ ನಡುವೆ ಶನಿವಾರ ಮೂರು ಇಸ್ರೇಲಿ ಒತ್ತೆಯಾಳುಗಳನ್ನೇ ಪಡೆಗಳು ತಪ್ಪಾಗಿ ಹೊಡೆದುರುಳಿಸಿದೆ. ಒತ್ತೆಯಾಳುಗಳನ್ನು ಹಮಾಸ್ ಶತ್ರುಗಳು ಎಂದು ತಪ್ಪಾಗಿ ಗ್ರಹಿಸಿ ಗುಂಡು ಹಾರಿಸಿದ್ದೇವೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಟ್ವಿಟರ್ ನಲ್ಲಿ ಹೇಳಿಕೊಂಡಿದೆ. ಸೇನಾ ವಕ್ತಾರರ ಪ್ರಕಟಣೆಯ ನಂತರ ಇಸ್ರೇಲ್ನಲ್ಲಿ ವ್ಯಾಪಕ ಪ್ರತಿಭಟನೆ ಕಾವೇರಿದೆ.
“ಇಸ್ರೇಲ್ ಜನರೊಂದಿಗೆ, ನಮ್ಮ ಮೂವರು ಪ್ರೀತಿಯ ಪುತ್ರರನ್ನು ಕಳೆದುಕೊಂಡಿರುವ ತೀವ್ರ ದುಃಖದಿಂದ ನಾನು ಶಿರ ಬಾಗಿಸುತ್ತೇನೆ” ಎಂದು ಅವರು ಹೇಳಿದರು. “ಇದೊಂದು ಕಷ್ಟಕರ ಮತ್ತು ಅಸಹನೀಯ ದುರಂತ” ಎಂದು ನೆತನ್ಯಾಹು ಹೀಬ್ರೂ ಭಾಷೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. “ಇಡೀ ಸಂಜೆ ಇಸ್ರೇಲ್ ರಾಷ್ಟ್ರವು ಅವರಿಗಾಗಿ ಶೋಕಿಸುತ್ತದೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನನ್ನ ಹೃದಯವು ಜತೆಗೂಡಲಿದೆ.” ಎಂದರು.
ಘಟನೆಯ ಹೊಣೆಯನ್ನು ಹೊತ್ತುಕೊಂಡ ಸೇನೆ
ಘಟನೆಯ ಹೊಣೆಯನ್ನು ಸೇನೆ ಹೊತ್ತುಕೊಂಡಿದೆ ಎಂದು ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ. ಯೋಟಮ್ ಹೈಮ್, ಸಮೀರ್ ತಲಲ್ಕಾ ಮತ್ತು ಅಲೋನ್ ಶಮ್ರಿಸ್ ಅವರನ್ನು ಕೊಲ್ಲಲ್ಪಟ್ಟ ಒತ್ತೆಯಾಳುಗಳು ಎಂದು IDF ಗುರುತಿಸಿದೆ. ಕಳೆದ ಕೆಲವು ದಿನಗಳಿಂದ ಹೋರಾಟ ಮುಂದುವರಿದಿರುವ ಶೆಜಯ್ಯ ಯುದ್ಧ ವಲಯದಲ್ಲಿ ಈ ಘಟನೆ ನಡೆದಿದೆ ಎಂದು ಇಸ್ರೇಲಿ ಸೇನೆ ವಿವರಿಸಿದೆ. ಈ ಘಟನೆಯಿಂದ ತಮ್ಮ ಸೈನಿಕರು ಪಾಠ ಕಲಿತಿದ್ದಾರೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. “ಐಡಿಎಫ್ ದುರಂತ ಘಟನೆಗೆ ತೀವ್ರವಾಗಿ ವಿಷಾದಿಸುತ್ತದೆ ಮತ್ತು ಕುಟುಂಬಗಳಿಗೆ ತನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಕಾಣೆಯಾದವರನ್ನು ಪತ್ತೆ ಮಾಡುವುದು ಮತ್ತು ಎಲ್ಲಾ ಒತ್ತೆಯಾಳುಗಳನ್ನು ಮನೆಗೆ ಹಿಂದಿರುಗಿಸುವುದು ನಮ್ಮ ಉದ್ದೇಶವಾಗಿದೆ” ಎಂದು IDF ಹೇಳಿಕೆಯಲ್ಲಿ ತಿಳಿಸಿದೆ.
ಒತ್ತೆಯಾಳುಗಳನ್ನು ಆಕಸ್ಮಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸೇನೆಯು ಬಹಿರಂಗಪಡಿಸಿದ ನಂತರ ನೂರಾರು ಪ್ರತಿಭಟನಾಕಾರರು ಟೆಲ್ ಅವೀವ್‌ನ ಕಿರಿಯಾ ಮಿಲಿಟರಿ ನೆಲೆಯ ಹೊರಗೆ ಜಮಾಯಿಸಿದರು ಎಂದು ಇಸ್ರೇಲಿ ಪತ್ರಿಕೆ ಹಾರೆಟ್ಜ್ ವರದಿ ಮಾಡಿದೆ.
ಒತ್ತೆಯಾಳುಗಳ ಬಿಡುಗಡೆಗಾಗಿ ಖತ್ತರಿನ ಕದ ತಟ್ಟಿದ ನೆತನ್ಯಾಹು
ಆಕಸ್ಮಿಕ ಹತ್ಯೆಯನ್ನು ಅಸಹನೀಯ ದುರಂತ ಎಂದು ಕರೆದಿರುವ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರೊಂದಿಗೆ ಒತ್ತೆಯಾಳು ಮಾತುಕತೆಯನ್ನು ಪುನರಾರಂಭಿಸಲು ಮೊಸಾದ್ ಮುಖ್ಯಸ್ಥ ಡೇವಿಡ್ ಬರ್ನಿಯಾ ಅವರನ್ನು ಯುರೋಪ್ ಗೆ ಕಳುಹಿಸಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.
ಏಳು ದಿನಗಳ ಕದನ ವಿರಾಮವು ಹಠಾತ್ತಾಗಿ ಕೊನೆಗೊಂಡ ನಂತರ ಹಿರಿಯ ಇಸ್ರೇಲಿ ಮತ್ತು ಕತಾರ್ ಅಧಿಕಾರಿಗಳ ನಡುವಿನ ಮೊದಲ ಸಭೆಯಾಗಿದ್ದು, ಈ ವಾರಾಂತ್ಯದಲ್ಲಿ ಬಾರ್ನಿಯಾ ಅವರು ಅಲ್ ಥಾನಿಯನ್ನು ಭೇಟಿಯಾಗುವ ನಿರೀಕ್ಷೆಯಿದೆ.
ಈ ವಾರದ ಆರಂಭದಲ್ಲಿ ಒತ್ತೆಯಾಳು ಮಾತುಕತೆಗಾಗಿ ಕತಾರ್‌ನ ರಾಜಧಾನಿ ದೋಹಾಗೆ ಪ್ರಯಾಣಿಸದಂತೆ ನೆತನ್ಯಾಹು ಮೊಸಾದ್ ಮುಖ್ಯಸ್ಥರನ್ನು ನಿರ್ಬಂಧಿಸಿದ್ದರು. ಆದಾಗ್ಯೂ, ಅವರು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ವರದಿಯಾಗಿದೆ.