ಕೊಚ್ಚಿ: ಕಳಮಶ್ಶೇರಿಯಲ್ಲಿ ನಡೆದ ಘಟನೆ ಬಾಂಬ್ ಸ್ಫೋಟದಿಂದಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಸ್ಫೋಟಕ್ಕೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡಿಜಿಪಿ ಶೇಖ್ ದರ್ವೇಶ್ ಸಾಹಿಬ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನಿಖೆಯ ನಂತರವೇ ಹೆಚ್ಚಿನ ವಿವರಗಳನ್ನು ನೀಡಬಹುದು ಎಂದು ಡಿಜಿಪಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ಗಳು ಸಲ್ಲದು. ಸುಳ್ಳು ಪ್ರಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಬೆಳಿಗ್ಗೆ 9.45 ರ ಸುಮಾರಿಗೆ ಮೊದಲ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಹೆಚ್ಚು ಸುಟ್ಟಗಾಯಗಳಾಗಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸಮಾವೇಶದಲ್ಲಿ 2200 ಮಂದಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.
ಸತತ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಕೇಳಿದ್ದಾರೆ. ಎನ್ಐಎ ಮತ್ತು ಎಸ್ಪಿಜಿ ಅಧಿಕಾರಿಗಳು ಸಭಾಂಗಣವನ್ನು ಪರಿಶೀಲಿಸಿದ್ದಾರೆ.