janadhvani

Kannada Online News Paper

ಮುಂದುವರಿದ ಇಸ್ರೇಲ್ ಹತ್ಯಾಕಾಂಡ, ವ್ಯಾಪಕ ಬಾಂಬ್ ದಾಳಿ- ಗಾಝಾದಲ್ಲಿ 4 ಸಾವಿರ ಮೀರಿದ ಮರಣ ಸಂಖ್ಯೆ

ಗಾಝಾದ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಮೇಲೆ ನಡೆದ ದಾಳಿಯಲ್ಲಿ 18 ಕ್ರಿಶ್ಚಿಯನ್ ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು

ಗಾಝಾ ಸಿಟಿ| ಎರಡು ವಾರಗಳಿಂದ ಇಸ್ರೇಲ್ ಗಾಝಾದಲ್ಲಿ ನಡೆಸುತ್ತಿರುವ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸಂಖ್ಯೆ 4,000 ಮೀರಿದೆ. ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 ರಂದು ಪ್ರಾರಂಭವಾದ ದಾಳಿಯಲ್ಲಿ ಇದುವರೆಗೆ 1661 ಮಕ್ಕಳು ಸಹಿತ 4,137 ಜನರು ಮರಣ ಹೊಂದಿದ್ದಾರೆ. 13260 ಜನರು ಗಾಯಗೊಂಡಿದ್ದಾರೆ.

ಹೆಚ್ಚುತ್ತಿರುವ ಜಾಗತಿಕ ಪ್ರತಿಭಟನೆಗಳ ಹೊರತಾಗಿಯೂ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಿದೆ, ಗಾಝಾ ಮತ್ತು ಪಶ್ಚಿಮ ದಂಡೆಯಲ್ಲಿನ ನಿರಾಶ್ರಿತರ ಶಿಬಿರಗಳ ಮೇಲಿನ ದಾಳಿಯಲ್ಲಿ ಡಜನ್ಗಟ್ಟಲೆ ಜನರು ಮೃತಪಟ್ಟಿದ್ದಾರೆ. ಇದರ ನಂತರ, ಗಾಝಾದ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ ಮೇಲೆ ನಡೆದ ದಾಳಿಯಲ್ಲಿ 18 ಕ್ರಿಶ್ಚಿಯನ್ ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು. ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಐದು ನೂರಕ್ಕೂ ಹೆಚ್ಚು ಜನರು ಈ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದರು.

ನೂರ್ ಶಮ್ಸ್ ನಿರಾಶ್ರಿತರ ಶಿಬಿರದ ಮೇಲೆ ನಿನ್ನೆ ರಾತ್ರಿ ನಡೆದ ಮತ್ತೊಂದು ದಾಳಿಯಲ್ಲಿ ಏಳು ಮಕ್ಕಳು ಸಹಿತ 13 ಪ್ಯಾಲೆಸ್ತೀನಿಯರು ಮರಣ ಹೊಂದಿದರು. ಹಲವು ನಿರಾಶ್ರಿತರನ್ನು ಇಸ್ರೇಲ್ ಸೇನೆ ಬಂಧಿಸಿದೆ ಎಂಬ ವರದಿಗಳೂ ಇವೆ.

ಅದೇ ವೇಳೆ, ಪ್ರಪಂಚದ ನಾನಾ ದೇಶಗಳಿಂದ ಗಾಝಾಕ್ಕೆ ಹರಿಯುವ ಮಾನವೀಯ ನೆರವು ಇನ್ನೂ ತಲುಪಿಲ್ಲ. ಇಸ್ರೇಲ್‌ನ ಹೊರಗಿನ ಗಾಝಾದ ಏಕೈಕ ಗಡಿಯಾದ ರಫಾ ಗಡಿಯ ಮೂಲಕ ನೆರವು ವಿತರಣೆಯನ್ನು ತಡೆಯುವುದಿಲ್ಲ ಎಂದು ಇಸ್ರೇಲ್ ನಿನ್ನೆ ಘೋಷಿಸಿತು, ಆದರೆ ಗಡಿಯನ್ನು ತೆರೆಯುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಹಲವೆಡೆಯಿಂದ ಮಾನವೀಯ ನೆರವನ್ನು ಸಾಗಿಸುವ ಟ್ರಕ್‌ಗಳನ್ನು ಗಡಿಯಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದೆ.

error: Content is protected !! Not allowed copy content from janadhvani.com