ದುಬೈ: ಒಂದೇ ಹೆಸರಿನ ಪಾಸ್‌ಪೋರ್ಟ್ ಸ್ವೀಕಾರಾರ್ಹವಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ. ಯುಎಇ ರಾಷ್ಟ್ರೀಯ ಮುಂಗಡ ಮಾಹಿತಿ ಕೇಂದ್ರವು(UAE National Advance Information Center) ಈ ನಿಟ್ಟಿನಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಸೂಚನೆಗಳನ್ನು ನೀಡಿದೆ. ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿದ್ದರೆ, ಪ್ರಯಾಣಕ್ಕೆ ಅನುಮತಿ ಲಭಿಸುವುದಿಲ್ಲ ಎಂಬುದನ್ನು ಮತ್ತೆ ಎಚ್ಚರಿಸಲಾಗಿದೆ.
ಯುಎಇಗೆ ಸಂದರ್ಶಕ ವೀಸಾದಲ್ಲಿ ಆಗಮಿಸುವವರಿಗೆ ಇದರಿಂದ ಹಿನ್ನಡೆಯಾಗಲಿದೆ. ಈಗಾಗಲೇ ಯುಎಇ ನಿವಾಸಿ ವೀಸಾ ಹೊಂದಿರುವ, ಪಾಸ್‌ಪೋರ್ಟ್‌ನಲ್ಲಿ ಒಂದೇ ಹೆಸರಿರುವವರಿಗೆ ಯುಎಇಗೆ ಆಗಮಿಸುವುದಕ್ಕೆ ಅಡ್ಡಿಯಿಲ್ಲ.
ಪಾಸ್‌ಪೋರ್ಟ್‌ನಲ್ಲಿ ಸರ್ ನೇಮ್ ಮತ್ತು ಗಿವನ್ ನೇಮ್ ಅಡಿಯಲ್ಲಿ ಒಂದೇ ಸ್ಥಳದಲ್ಲಿ ಹೆಸರನ್ನು ನಮೂದಿಸಿದರೆ, ಪ್ರಯಾಣ ಪರವಾನಗಿಯನ್ನು ನೀಡಲಾಗುವುದಿಲ್ಲ. ಆದರೆ ಸರ್ ನೇಮ್ ಮತ್ತು ಗಿವನ್ ನೇಮ್‌ನಲ್ಲಿ ಎಲ್ಲಿಯಾದರೂ ಎರಡು ಹೆಸರುಗಳಿದ್ದರೆ ಪ್ರವೇಶವನ್ನು ಅನುಮತಿಸಲಾಗುತ್ತದೆ.
ಗಿವನ್ ನೇಮ್ ನಲ್ಲಿ ಹೆಸರು ಇದ್ದು, ಸರ್ ನೇಮ್ ಖಾಲಿ ಇದ್ರೆ ಅಥವಾ ಸರ್ ನೇಮ್ ನಲ್ಲಿ ಹೆಸರಿದ್ದು, ಗಿವನ್ ನೇಮ್ ಖಾಲಿ ಇದ್ರೆ ಯುಎಇ ಪ್ರವೇಶ ಸಾಧ್ಯವಿಲ್ಲ ಎಂದು ಈ ಮೊದಲೇ ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮತ್ತೊಮ್ಮೆ ನೋಟಿಸ್ ಜಾರಿ ಮಾಡಲಾಗಿದೆ. ಅದೇ ಸಮಯದಲ್ಲಿ, ಪಾಸ್‌ಪೋರ್ಟ್‌ನ ಯಾವುದೇ ಪುಟದಲ್ಲಿ ಎರಡನೇ ಹೆಸರನ್ನು ಉಲ್ಲೇಖಿಸಿದ್ದಲ್ಲಿ ಅದನ್ನು ಸ್ವೀಕರಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.