ಕೋಝಿಕ್ಕೋಡ್: ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರು, ಐದು ದಿನಗಳ ಪ್ರವಾಸಕ್ಕಾಗಿ ಮಲೇಷ್ಯಾ ತಲುಪಿದ್ದಾರೆ. ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಅವರ ವಿಶೇಷ ಆಹ್ವಾನದ ಮೇರೆಗೆ ಎ.ಪಿ ಅಬೂಬಕರ್ ಮುಸ್ಲಿಯಾರ್ ಮಲೇಷ್ಯಾ ತಲುಪಿದ್ದಾರೆ.
ಮಲೇಷ್ಯಾ ಪ್ರಧಾನಿ ಕಳುಹಿಸಿಕೊಟ್ಟ ವಿಶೇಷ ವಿಮಾನದ ಮೂಲಕ ಕೋಝಿಕ್ಕೋಡ್ ವಿಮಾನ ನಿಲ್ದಾಣದಿಂದ ತೆರಳಿ, ಮುಂಜಾನೆ 3 ಗಂಟೆಗೆ ಕೌಲಾಲಂಪುರ ವಿಮಾನ ನಿಲ್ದಾಣಕ್ಕೆ ತಲುಪಿದ ಕಾಂತಪುರಂ ಉಸ್ತಾದರನ್ನು ಸರ್ಕಾರಿ ಪ್ರತಿನಿಧಿಗಳು ಮತ್ತು ಮರ್ಕಝ್ ಗ್ಲೋಬಲ್ ಮಲೇಷಿಯಾ ಚಾಪ್ಟರ್ ಪ್ರತಿನಿಧಿಗಳು ಬರಮಾಡಿಕೊಂಡರು. ಬಳಿಕ ಕಾಂತಪುರಂ ಉಸ್ತಾದರನ್ನು ಪ್ರಧಾನಿ ಕಚೇರಿಗೆ ಕರೆದೊಯ್ಯಲಾಯಿತು.
ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಕಾಂತಪುರಂ ಉಸ್ತಾದರ ನಡುವಿನ ಮಾತುಕತೆಯಲ್ಲಿ ಮಲೇಷ್ಯಾ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ವಿನಿಮಯವನ್ನು ಚರ್ಚಿಸಲಾಯಿತು. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿರುವ ಮಲೇಷ್ಯಾ, ಶೇಕಡಾ ಒಂಬತ್ತರಷ್ಟಿರುವ ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಳ್ಳುವ ವಿಧಾನವನ್ನು ಹೊಂದಿದೆ.
ಭಾರತದೊಂದಿಗೆ ಹಲವು ಕ್ಷೇತ್ರಗಳಲ್ಲಿ ಸಂಬಂಧವನ್ನು ಬಲಪಡಿಸುವ ಉದ್ದೇವಿದೆ, ಪ್ರಧಾನಿ ನರೇಂದ್ರ ಮೋದಿಯವರು ಭಾರತಕ್ಕೆ ಆಹ್ವಾನಿಸಿದ್ದಾರೆ ಎಂದು ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾರತದ ಗ್ರ್ಯಾಂಡ್ ಮುಫ್ತಿ ಅವರಿಗೆ ತಿಳಿಸಿದರು. ಬೋಧನೆ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಹುರುಪಿನಿಂದ ಮುಂದುವರಿಸುತ್ತಿರುವ ಕಾಂತಪುರಂ ಉಸ್ತಾದರನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಇಬ್ಬರೂ ಪ್ರೀತಿಯ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು
ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಂತಪುರಂ ಅವರು, ಸುದೀರ್ಘ 9 ತಿಂಗಳ ಬಳಿಕ, ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮರ್ಕಝ್ ನಾಲೆಡ್ಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ. ಅಬ್ದುಲ್ ಹಕೀಂ ಅಝ್ಹರಿ, ನಾಲೆಡ್ಜ್ ಸಿಟಿಯ ಸಿಇಒ ಡಾ. ಅಬ್ದುಸ್ಸಲಾಂ, ಜಾಮಿಉಲ್ ಫುತೂಹ್ ನಿರ್ವಹಣಾ ಸಮಿತಿ ಅಧ್ಯಕ್ಷ ಕುಟ್ಟೂರು ಅಬ್ದುರ್ರಹ್ಮಾನ್ ಹಾಜಿ ಮೊದಲಾದವರು ಕಾಂತಪುರಂ ಉಸ್ತಾದರ ಜೊತೆಗಿದ್ದಾರೆ.
ಕಾಂತಪುರಂ ಉಸ್ತಾದರು ಮುಂದಿನ ದಿನಗಳಲ್ಲಿ ಮಲೇಷ್ಯಾದಲ್ಲಿ ನಡೆಯಲಿರುವ ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜುಲೈ 22 ಶನಿವಾರದಂದು ಕಾಂತಪುರಂ ಉಸ್ತಾದರು, ಸಹೀಹುಲ್ ಬುಖಾರಿ ವಿದ್ವಾಂಸರ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಆ ಕಾರ್ಯಕ್ರಮವನ್ನು ಅಲ್ಲಿನ ಪ್ರಧಾನಿ ಅನ್ವರ್ ಇಬ್ರಾಹಿಂ ಉದ್ಘಾಟಿಸುವರು. ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಹೀಮ್ ಬಿನ್ ಮುಖ್ತಾರ್, ಶೈಖ್ ಡಾ. ಉಸಾಮಾ ಅಲ್ ಅಝ್ಹರಿ, ಮುಫ್ತಿ ಡಾ. ಲುಕ್ಮಾನ್ ಬಿನ್ ಹಾಜಿ ಅಬ್ದುಲ್ಲಾ ಭಾಗವಹಿಸಲಿದ್ದಾರೆ.