ಮಕ್ಕಾ: ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಆಗಮಿಸಿದ ಕೊಡಗಿನ ಮಡಿಕೇರಿ ನಿವಾಸಿ ಝುಹ್ರಾಬಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಶನಿವಾರದಂದು ಮಕ್ಕಾದಲ್ಲಿ ನಿಧನರಾಗಿದ್ದರು
ಅಸೌಖ್ಯದಲ್ಲಿರುವಾಗ ಆಸ್ಪತ್ರೆಗೆ ಸಾಗಿಸಲು ಹಾಗೂ ದಫನ ಕಾರ್ಯಕ್ಕೆ ಬೇಕಾದ ಅವಶ್ಯಕ ದಾಖಲೆಗಳನ್ನು ಸರಿಪಡಿಸಲು ಮುತುವರ್ಜಿ ವಹಿಸಿ ಸಹಕರಿಸುವಲ್ಲಿ ಕೆಸಿಎಫ್ ಜಿದ್ದಾ ಝೋನ್ ಸಾಂತ್ವನ ಇಲಾಖೆ ಅಧ್ಯಕ್ಷರು ಹಾಗೂ ಹಜ್ಜ್ ವಾಲೇಂಟೀರ್ ಕೋರ್ ನಾಯಕರಾದ ಮೂಸಾ ಹಾಜಿ ಕಿನ್ಯ ಪ್ರಮುಖ ಪಾತ್ರ ವಹಿಸಿದ್ದರು. ಮೃತರ ದಫನ ಕಾರ್ಯ ಮಕ್ಕಾದ ಸರಯಾ ಕಬರ್ ಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಹರಂ ಶರೀಫ್ ನಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸಿ ದಫನ್ ಕಾರ್ಯ ಮಾಡಲಾಯಿತು.
ಈ ಸಂದರ್ಭ ಮಗ ರಫೀಕ್ ಮಡಿಕೇರಿ ಹಾಗೂ ಕೆಸಿಎಫ್ ಮಕ್ಕತುಲ್ ಮುಕರ್ರಮಾ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಕೋಳಿಯೂರು, ಇಹ್ಸಾನ್ ಇಲಾಖೆ ಅಧ್ಯಕ್ಷರು ಲತೀಫ್ ನೆಲ್ಯಾಡಿ ಪಾಲ್ಗೊಂಡಿದ್ದರು.
ಹಜ್ಜ್ ವಾಲೇಂಟೀರ್ ಕೋರ್ 2023, ಸ್ವಯಂ ಸೇವಕರ ತಂಡ ಹಜ್ಜ್ ಸಂದರ್ಭದಲ್ಲಿ ಇಂತಹ ಹಲವು ಮರಣ ಪ್ರಕ್ರಿಯೆಗಳಲ್ಲಿ ಸಂದರ್ಭಕ್ಕೆ ಅನುಗುಣವಾಗಿ ತೊಡಗಿಸಿಕೊಂಡು ಸಹಕರಿಸುತ್ತಾ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.