janadhvani

Kannada Online News Paper

ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ: ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕು- DYFI

ಕೊಲೆಗೆ ಕೋಮುಬಣ್ಣ ಹಚ್ಚಲು, ಧರ್ಮಗಳ ನಡುವೆ ಅಪನಂಬಿಕೆ ಹುಟ್ಟಿಸಲು, ಸರಕಾರದ ಮೇಲೆ ಧಾರ್ಮಿಕ ತಾರತಮ್ಯ ಕಳಂಕ ಹೊರಿಸಲು ಯತ್ನಿಸಿದ ಸೂಲಿಬೆಲೆ

ಮಂಗಳೂರು: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ರವಿವಾರ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುವಂತೆ DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟನೆ ಹೊರಡಿಸಿರುವ ಅವರು, ” ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಬಿಜೆಪಿ ಪಾಲಿಕೆ ಸದಸ್ಯನ‌ ಸಹೋದರನ ಸಹಿತ ಕೃತ್ಯದಲ್ಲಿ ಭಾಗಿಯಾದವರ ಬಂಧನ ‌ನಡೆದಿದೆ. ಇದು‌ ಯುವ (ನಮೋ) ಬ್ರಿಗೇಡ್ ಕಾರ್ಯಕರ್ತರ ನಡುವಿನ ಸಂಘರ್ಷ ಎಂಬುದು ದಿಟ.

ತನ್ನ ಸಂಘಟನೆಯ ಕಾರ್ಯಕರ್ತರ ಈ ಹೀ‌ನ ಕೃತ್ಯಕ್ಕೆ ಹೊಣೆ ಹೊರಬೇಕಾಗಿದ್ದ ಸೂಲಿಬೆಲೆ “ಹಿಂದುವಿನ ಕೊಲೆ ನಡೆದಿದೆ, ಕಾಂಗ್ರೆಸ್ ಆಡಳಿತದಲ್ಲಿ ಹಿಂದುಗಳು ಅಪಾಯಕ್ಕೆ ಗುರಿಯಾಗಿದ್ದಾರೆ” ಎಂದು ಬೊಬ್ಬೆ ಹೊಡೆಯಲು ತೊಡಗಿದ್ದರು.
ಆ ಮೂಲಕ ಕೊಲೆಗೆ ಮತೀಯ ಬಣ್ಣ ಬಳಿಯುವುದು, ಹಿಂದು ವಿರೋಧಿ ಸರಕಾರ ಎಂದು ಬಿಂಬಿಸುವುದು, ಅರಾಜಕತೆ ಸೃಷ್ಟಿಸುವುದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ‌ಗೆ ಪೂರಕ ವಾತಾವರಣ ನಿರ್ಮಿಸುವುದು ಇವರ ಪ್ರಧಾನ ಉದ್ದೇಶ ಆಗಿತ್ತು” ಎಂದು ಮುನೀರ್ ದೂರಿದ್ದಾರೆ.

ಈಗ ಕೊಲೆಯ ಕಾರಣ ಪತ್ತೆಯಾಗಿದೆ. ಪ್ರಕರಣದ ಸರಿಯಾದ ತನಿಖೆ ನಡೆಯಬೇಕು. ಅದರ ಜೊತೆಗೆ ಕೊಲೆಗೆ ಕೋಮುಬಣ್ಣ ಹಚ್ಚಲು, ಧರ್ಮಗಳ ನಡುವೆ ಅಪನಂಬಿಕೆ ಹುಟ್ಟಿಸಲು, ಸರಕಾರದ ಮೇಲೆ ಧಾರ್ಮಿಕ ತಾರತಮ್ಯ ಕಳಂಕ ಹೊರಿಸಲು ಯತ್ನಿಸಿದ ಸೂಲಿಬೆಲೆಯ ಮೇಲೆ ಪ್ರಕರಣ ಹೂಡಬೇಕು, ಆತನನ್ನು ವಿಚಾರಣೆಗೆ ಒಳಪಡಿಸಬೇಕು. ಆತನ ಆಟಾಟೋಪಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಅನಗತ್ಯ ಗೊಂದಲಗಳಿಗೆ ಸೂಲಿಬೆಲೆ ಪಟಾಲಂ ಕಾರಣವಾಗಲಿದೆ” ಎಂದು ತಿಳಿಸಿದ್ದಾರೆ.

“ಪುನೀತ್ ಕೆರೆಹಳ್ಳಿಯಂತವರನ್ನು ಕೊಲೆಗೆ ಪ್ರಚೋದಿಸಿ, ಜಾಮೀನಿನ ಮೇಲೆ ಅವರು ಹೊರಬಂದ ತಕ್ಷಣ ಕರೆದು ಔತಣ ಕೂಟ ಏರ್ಪಡಿಸಿದ ಸಂದರ್ಭದಲ್ಲೇ ಈತನ ವಿಚಾರಣೆ ನಡೆಯಬೇಕಿತ್ತು. ಈಗಲಾದರು ಸರಕಾರ ಎಚ್ಚೆತ್ತುಕೊಂಡು ಬಿಗಿ ಕ್ರಮಗಳನ್ನು ಜರುಗಿಸಬೇಕು” ಎಂದು ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com