ಸಕಲೇಶಪುರ: ಪ್ರಚೋದನಕಾರಿ ಭಾಷಣ ಹಿನ್ನೆಲೆಯಲ್ಲಿ ಪೋಲಿಸರು ಭಜರಂಗದಳ ಮಾಜಿ ರಾಜ್ಯ ಸಂಚಾಲಕ ರಘು ಸಕಲೇಶಪುರರವರ ಮನೆಗೆ ನುಗ್ಗಿ ಬಂಧಿಸಲು ಮುಂದಾಗಿದ್ದಾರೆ. ಆದರೆ ಸ್ಥಳದಿಂದ ರಘು ಪರಾರಿಯಾಗಿದ್ದು ಪೋಲಿಸರು ರಘು ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.
ತಾಲೂಕಿನ ಕ್ಯಾಮನಹಳ್ಳಿ ಸೇರಿದಂತೆ ಸುತ್ತಮುತ್ತಲು ಗೋಹತ್ಯೆ ನಡೆಸಲಾಗುತ್ತಿದೆಯೆಂದು ಆರೋಪಿಸಿ ವಿಎಚ್ ಪಿ ಹಾಗೂ ಭಜರಂಗದಳ ವತಿಯಿಂದ ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ ನಾಯಕರು ಮಾಡಿದ ಪ್ರಚೋದನಕಾರಿ ಭಾಷಣಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿರುವ ರಘು, ಮುಸ್ಲಿಮ್ ಮೀನು ವ್ಯಾಪಾರಿ, ತರಕಾರಿಯ ವ್ಯಾಪಾರಿಗಳು ನಮ್ಮ ಮನೆಯಂಗಳಕ್ಕೆ ಬರಬೇಕಾದ್ರೆ ಎಚ್ಚರಿಕೆಯಿಂದ ಬರಬೇಕು ಎಂದು ವಾರ್ನ್ ಮಾಡಿರುವ ರಘು, ಇಲ್ಲಂದ್ರೆ ಏನಾಗುತ್ತೆ ಗೊತ್ತಲ್ಲ, ನಮ್ಮ ಮನೆಯಲ್ಲಿರುವ ಕೋವಿಗಳು ಹೊರಗೆ ಬರುತ್ತವೆ. ನಾವು ಕೂಡ ಗುಂಡು ಹಾರಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರೆಂಬ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿರುವ ಪೋಲೀಸರು, ರಘು ಸಕಲೇಶಪುರ ಸೇರಿದಂತೆ ಸಂಘಟನೆಯ ಕೆಲವು ಮುಖಂಡರನ್ನು ಬಂಧಿಸಲು ಮುಂದಾಗಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸರನ್ನು ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.