ಸ್ಟಾಕ್ ಹೋಮ್: ಪವಿತ್ರ ಖುರ್ಆನ್ ದಹಿಸಿ ಪ್ರತಿಭಟನೆಗೆ ಅನುಮತಿ ನೀಡಿದ ಸ್ವೀಡನ್ ನ್ಯಾಯಾಲಯದ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ.
ಬಕ್ರೀದ್ ಹಬ್ಬದ ದಿನದಂದು ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿರುವ ಮಸೀದಿಯ ಮುಂದೆ ಖುರ್‌ಆನ್ ಅನ್ನು ದಹಿಸಿ ಪ್ರತಿಭಟಿಸಲು ಮೇಲ್ಮನವಿ ನ್ಯಾಯಾಲಯ ಅನುಮತಿ ನೀಡಿದೆ. ನಗರದ ಮಧ್ಯಭಾಗದಲ್ಲಿರುವ ಸೊಡರ್ಮಾಮ್ ದ್ವೀಪದಲ್ಲಿರುವ ಮುಖ್ಯ ಮಸೀದಿಯ ಪರಿಸರ ಪ್ರತಿಭಟನೆ ನಡೆಸಲಾಗುವುದು.
ಖುರ್‌ಆನ್ ದಹನಕ್ಕೆ ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಕಳೆದ ಜನವರಿಯಲ್ಲಿ ಟರ್ಕಿಯ ರಾಯಭಾರಿ ಕಚೇರಿ ಎದುರು ಇದೇ ರೀತಿಯ ಪ್ರತಿಭಟನೆ ನಡೆಸಲಾಗಿತ್ತು. ಟರ್ಕಿ ಮತ್ತು ಇತರ ಮುಸ್ಲಿಂ ರಾಷ್ಟ್ರಗಳು ಈ ವಿಷಯದ ಬಗ್ಗೆ ತೀವ್ರ ಪ್ರತಿಭಟನೆಗಳನ್ನು ಎತ್ತಿದವು.
ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಸ್ವೀಡನ್ ನ ನ್ಯಾಟೋ ಸದಸ್ಯತ್ವಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದರು.
ಬಾಗ್ದಾದ್ ನಲ್ಲಿ ಸ್ವೀಡಿಷ್ ರಾಯಭಾರ ಕಚೇರಿಗೆ ಮುತ್ತಿಗೆ
ಇರಾಕ್ ನ ರಾಜಧಾನಿ ಬಾಗ್ದಾದ್ ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸ್ವೀಡನ್‌ನಲ್ಲಿ ಕುರಾನ್‌ನ ಪ್ರತಿಯನ್ನು ಸುಟ್ಟುಹಾಕಿದ ಒಂದು ದಿನದ ನಂತರ, ಗುರುವಾರ ಬಾಗ್ದಾದ್‌ನಲ್ಲಿರುವ ಸ್ವೀಡಿಷ್ ರಾಯಭಾರ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಭಾರೀ ಗಾತ್ರದ ಬ್ಯಾರಿಕೇಡನ್ನು ಹತ್ತಿ ರಾಯಭಾರ ಕಚೇರಿಯ ವರಾಂಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಇರಾಕಿನ ಭದ್ರತಾ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಿದರು.
ಪ್ರಬಲ ಇರಾಕಿನ ಶಿಯಾ ಧರ್ಮಗುರು ಮುಕ್ತದಾ ಅಲ್-ಸದರ್ ಪ್ರತಿಭಟನೆಗೆ ಆದೇಶಿಸಿದ್ದು, ಬಾಗ್ದಾದ್‌ನಲ್ಲಿರುವ ಸ್ವೀಡಿಷ್ ರಾಯಭಾರಿಯನ್ನು ಹೊರಹಾಕುವಂತೆ ಕರೆ ನೀಡಿದ್ದಾರೆ.