janadhvani

Kannada Online News Paper

ಜಿದ್ದಾದಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಎದುರು ಗುಂಡಿನ ದಾಳಿ- ಇಬ್ಬರು ಬಲಿ

ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹೊರಬಂದು ಬಂದೂಕಿನಿಂದ ಕಾನ್ಸುಲೇಟ್‌ನತ್ತ ಗುಂಡು ಹಾರಿಸಿದ್ದಾನೆ.

ರಿಯಾದ್: ಜಿದ್ದಾದಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಎದುರು ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕಾನ್ಸುಲೇಟ್ ಕಟ್ಟಡದ ಬಳಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಹೊರಬಂದು ಬಂದೂಕಿನಿಂದ ಕಾನ್ಸುಲೇಟ್‌ನತ್ತ ಗುಂಡು ಹಾರಿಸಿದ್ದಾನೆ.ಆತನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿರುವುದಾಗಿ ಸೌದಿ ಅರೇಬಿಯಾದ ಅಧಿಕೃತ ಸುದ್ದಿ ಸಂಸ್ಥೆ SPA ವರದಿ ಮಾಡಿದೆ.

ಬುಧವಾರ ಸಂಜೆ 6.45ಕ್ಕೆ ಗುಂಡಿನ ದಾಳಿ ನಡೆದಿದೆ. ಮೃತರಲ್ಲಿ ಒಬ್ಬರು ನೇಪಾಳಿ ಪ್ರಜೆಯಾಗಿದ್ದು, ಅವರು ಖಾಸಗಿ ಭದ್ರತಾ ಏಜೆನ್ಸಿಯ ಉದ್ಯೋಗಿಯಾಗಿದ್ದು, ಅಮೆರಿಕದ ಕಾನ್ಸುಲೇಟ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದರು.ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟಿದ್ದರು. ಕಾರಿನಲ್ಲಿ ಬಂದಾತನ ಗುರುತು ಪತ್ತೆಯಾಗಿಲ್ಲ.

ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಯಾವುದೇ ಕಾನ್ಸುಲೇಟ್ ಸಿಬ್ಬಂದಿ ಅಥವಾ ಅಮೆರಿಕದ ನಾಗರಿಕರು ಗಾಯಗೊಂಡಿಲ್ಲ ಮತ್ತು ಘಟನೆಯ ನಂತರ ಕಾನ್ಸುಲೇಟ್ ಅನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಮಕ್ಕಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಕಾರಿನಲ್ಲಿ ಬಂದವನು ಗುಂಡು ಹಾರಿಸಿದ ನಂತರ ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದ್ದು, ಅದು ಉಗ್ರನ ಸಾವಿಗೆ ಕಾರಣವಾಯಿತು ಎಂಬುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುಎಸ್ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಸೌದಿ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೇಳಿದೆ.