ಮಕ್ಕತುಲ್ ಮುಕರ್ರಮಃ,ಜೂನ್.27: ಹಜ್ ಕರ್ಮದ ಪ್ರಮುಖ ಅಂಶವಾಗಿರುವ ಅರಫಾ ಸಂಗಮವು ಇಂದು ನಡೆಯುತ್ತಿದೆ. ದುಲ್ ಹಜ್ 9ನೇ ದಿನವಾದ ಇಂದು ಬೆಳಗ್ಗೆಯಿಂದಲೇ ಯಾತ್ರಾರ್ಥಿಗಳು ಅರಫಾಕ್ಕೆ ಆಗಮಿಸಿದ್ದಾರೆ.
ಮಸ್ಜಿದ್ ನಮಿರಾದಲ್ಲಿ ನಡೆಯುವ ಖುತುಬಾ ದೊಂದಿಗೆ ಅರಫಾ ಸಂಗಮ ಆರಂಭವಾಗಲಿದೆ. 150 ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ 20 ಲಕ್ಷಕ್ಕೂ ಹೆಚ್ಚು ಹಜ್ಜಾಜ್‌ಗಳು ಅರಾಫಾದಲ್ಲಿ ಸಂಗಮಿಸುತ್ತಾರೆ. ವರ್ಣ, ಭಾಷೆ, ವೇಷಗಳ ವ್ಯತ್ಯಾಸವಿಲ್ಲದೆ ಎಲ್ಲರೂ ಸಮಾನರಾಗಿ ಒಗ್ಗೂಡುವ ಜಗತ್ತಿನ ಏಕೈಕ ಮಹಾ ಸಂಗಮವಾಗಿದೆ ಅರಫಾ ಸಂಗಮ.
ಅರಫಾದ ದಿನವಿಡೀ ವಿಶ್ವಾಸಿಗಳು ಪ್ರಾರ್ಥನೆಯಲ್ಲಿ ಮುಳುಗಿರುತ್ತಾರೆ.ಹಜ್ಜಾಜ್ ಗಳು ಅರಫಾದಲ್ಲಿ ಸಂಗಮಿಸುವ ದುಲ್ ಹಜ್ ಒಂಬತ್ತರಂದು ವಿಶ್ವದಾದ್ಯಂತ ಮುಸ್ಲಿಮರು ಅರಫಾ ಉಪವಾಸವನ್ನು ಆಚರಿಸಿ ಹಜ್ ಯಾತ್ರಿಕರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವರು.
ಹಜ್ಜಾಜ್‌ಗಳು 32,000 ಬಸ್‌ಗಳಲ್ಲಿ ಅರಾಫಾಗೆ ತೆರಳುವರು. ಅರಫಾ ಸಂಗಮದಲ್ಲಿ ಭಾಗಿಯಾಗದವರಿಗೆ ಹಜ್ಜ್ ನ ಪುಣ್ಯ ಸಿಗುವುದಿಲ್ಲ. ಆದ್ದರಿಂದ ಎಲ್ಲರನ್ನೂ ಸಮಯಕ್ಕೆ ಸರಿಯಾಗಿ ಅರಫಾ ಸಂಗಮಕ್ಕೆ ತಲುಪಿಸಲು ಬಸ್‌ಗಳಿಗೆ ಸಮಯ ನಿಗದಿಪಡಿಸಲಾಗಿದೆ.
ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ವಿದಾಯ ಭಾಷಣವನ್ನು ಸ್ಮರಿಸುತ್ತಾ, ಡಾ. ಯೂಸುಫ್ ಬಿನ್ ಮುಹಮ್ಮದ್ ಬಿನ್ ಸಯೀದ್ ಅರಫಾ ಖುತುಬಾ ನೀಡಲಿದ್ದಾರೆ. ಇದು ಅರಾಫಾದ ನಮಿರಾ ಮಸೀದಿಯಲ್ಲಿ ನಡೆಯಲಿದೆ. ಮಸೀದಿಯ ಒಳಗಡೆ 4 ಲಕ್ಷ ಯಾತ್ರಾರ್ಥಿಗಳಿಗೆ ಸೌಲಭ್ಯವಿದೆ. ಉಳಿದ 16 ಲಕ್ಷಕ್ಕೂ ಮಿಕ್ಕ ಹಜ್ಜಾಜ್‌ಗಳು ಮಸೀದಿಯ ಹೊರಗಿನ ಅರಫಾ ಮೈದಾನದಲ್ಲಿ ಮತ್ತು ಕರುಣೆಯ ಬೆಟ್ಟ ಎಂಬ ಅರ್ಥವುಳ್ಳ ಜಬಲು ರ್ರಹ್ಮಾ ದ ತಪ್ಪಲಿನಲ್ಲಿ ವಿವಿಧ ಟೆಂಟ್‌ಗಳಲ್ಲಿ ಖುತುಬಾವನ್ನು ಆಲಿಸುವರು.
ಅರಬಿ ಭಾಷೆಯ ಅರಫಾ ಖುತುಬವನ್ನು, ಮಲಯಾಳಂ ಸೇರಿದಂತೆ 20 ಭಾಷೆಗಳಿಗೆ ನೈಜ ಸಮಯದಲ್ಲಿ ಅನುವಾದಿಸಲಾಗುತ್ತದೆ. ಬಳಿಕ ಲುಹರ್ ಮತ್ತು ಅಸರ್ ನಮಾಝ್ ಒಟ್ಟಿಗೆ (ಜಮ್ಅ್) ನಡೆಯಲಿದೆ. ಇದರ ನಂತರ, ಹಜ್ಜಾಜ್‌ಗಳು ಸೂರ್ಯಾಸ್ತದವರೆಗೆ ಪ್ರಾರ್ಥನೆಯೊಂದಿಗೆ ಅರಫಾದಲ್ಲಿ ಇರುವರು.
ಸೂರ್ಯಾಸ್ತದ ನಂತರ, ಯಾತ್ರಿಕರು ಮುಝ್ದಲಿಫಾಗೆ ತೆರಳುತ್ತಾರೆ. ಅಲ್ಲಿ ಇಂದು ರಾತ್ರಿ ತಂಗುತ್ತಾರೆ. ಮಗ್ರಿಬ್ ಮತ್ತು ಇಶಾ ನಮಾಜ್ ಅಲ್ಲಿ ನಿರ್ವಹಿಸುವರು. ಮಧ್ಯರಾತ್ರಿಯ ನಂತರ ಮಿನಾಗೆ ಹಿಂದಿರುಗುತ್ತಾರೆ. ಮೊದಲ ದಿನ ಜಮ್ರತುಲ್ ಅಖಬಾದಲ್ಲಿ ಶೈತಾನನಿಗೆ ಕಲ್ಲೆಸೆಯುವ ಕರ್ಮವನ್ನು ಪೂರ್ಣಗೊಳಿಸುತ್ತಾರೆ. ಮುಂದಿನ ಮೂರು ದಿನ ರಾತ್ರಿಗಳನ್ನು ಮಿನಾದಲ್ಲಿ ತಂಗುವರು.