janadhvani

Kannada Online News Paper

ಡಿಸಿಎಂ ಸ್ಥಾನವನ್ನು ಮುಸ್ಲಿಮ್ ಶಾಸಕರಿಗೆ ನೀಡಬೇಕು- ವಕ್ಫ್ ಅಧ್ಯಕ್ಷ ಶಾಫಿ ಸಅದಿ ಬೇಡಿಕೆ

ನಾವು ಮುಖ್ಯಮಂತ್ರಿ ಸ್ಥಾನ ಕೇಳುತ್ತಿಲ್ಲ, ಕರ್ನಾಟಕ ಇತಿಹಾಸದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಆಗಿಲ್ಲ ಎಂದರು.

ಬೆಂಗಳೂರು: 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಬಂದ ಹಿನ್ನೆಲೆ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಈ ನಡುವೆ ಮುಸ್ಲಿಂ ಶಾಸಕರಿಗೆ ಮಂತ್ರಿಗಿರಿ ಹಾಗೂ ಡಿಸಿಎಂ ಸ್ಥಾನ ನೀಡಬೇಕೆಂದು ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ಬೇಡಿಕೆ ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಶೇ 88 ರಷ್ಟು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. 224 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಮುಸ್ಲಿಮರು ಚುನಾವಣೆಗೆ ಸ್ಪರ್ಧಿಸಿದ್ದರು,ಅದರಲ್ಲಿ 9 ಮಂದಿ ಗೆದ್ದಿದ್ದಾರೆ. ಮಾತ್ರವಲ್ಲದೆ, ರಾಜ್ಯದಲ್ಲಿ 73 ಶಾಸಕರು ಗೆಲ್ಲಲು ಮುಸ್ಲಿಮರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಹೇಳಿದ ಶಾಫೀ ಸಅದಿ, ಜಾತ್ಯಾತೀತ ಪಕ್ಷವನ್ನು ಬೆಂಬಲಿಸುವಂತೆ ಎಲ್ಲಾ ಮೊಹಲ್ಲಾಗಳಲ್ಲಿ ಅಭಿಯಾನ, ಜಾಗೃತಿ ಮೂಡಿಸಲಾಗಿತ್ತು ಎಂದು ತಿಳಿಸಿದರು.

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದಲ್ಲಿ ಮುಸ್ಲಿಂ ಸಮುದಾಯದಿಂದ ಆಯ್ಕೆಯಾದ ಐದು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗಾಗಿ ಈ ಬಾರಿಯ ಸರ್ಕಾರದಲ್ಲೂ ಐವರಿಗೆ ಸಚಿವ ಸ್ಥಾನ ಮತ್ತು ಒಂದು ಡಿಸಿಎಂ ಹುದ್ದೆ ನೀಡಬೇಕು. ನಾವು ಮುಖ್ಯಮಂತ್ರಿ ಸ್ಥಾನ ಕೇಳುತ್ತಿಲ್ಲ, ಕರ್ನಾಟಕ ಇತಿಹಾಸದಲ್ಲಿ ಮುಸ್ಲಿಂ ಮುಖ್ಯಮಂತ್ರಿ ಆಗಿಲ್ಲ ಎಂದರು.

ನಮ್ಮಲ್ಲಿ ಒಂಬತ್ತು ಜನ ಮುಸ್ಲಿಂ ಶಾಸಕರಿದ್ದಾರೆ ಅದರಲ್ಲಿ ಯಾರು ಸೂಕ್ತ ಎಂದು ನೋಡಿಕೊಂಡು ಕಾಂಗ್ರೆಸ್ ಪಾರ್ಟಿ ಡಿಸಿಎಂ ಸ್ಥಾನ ನೀಡಲಿ. ಒಂಬತ್ತು ಜನರಲ್ಲಿ ಯಾರಿಗಾದರೂ ಕೊಡಲಿ ಎಂದು ಆಗ್ರಹ ಮಾಡುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಮುಸ್ಲಿಂ ಮುಖಂಡರು ಜೆಡಿಎಸ್ ಪಕ್ಷಕ್ಕೆ ಹೋಗಿದ್ದರು. ಆದರೂ, ಶೇ 88 ರಷ್ಟು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದಾರೆ ಎಂದರು. ಹಿಜಾಬ್ ಮತ್ತು ಸಾಕಷ್ಟು ವಿಚಾರದಲ್ಲಿ ಮುಸ್ಲಿಮರು ಭಯಬೀತರಾಗಿದ್ದರು. ಆ ಹಿನ್ನೆಲೆಯಲ್ಲಿ ಮುಸ್ಲಿಮರು ಕಾಂಗ್ರೆಸ್ ಪಾರ್ಟಿಗೆ ಮತ ನೀಡಿ ಗೆಲ್ಲಿಸಿದ್ದಾರೆ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನ ಗಳಿಸಿ ಭರ್ಜರಿ ಬಹುಮತ ಪಡೆದಿದೆ. ಬಿಜೆಪಿ 66 ಹಾಗೂ ಜೆಡಿಎಸ್ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿವೆ. ಇತರರು ಮೂರು ಕಡೆ ಗೆಲುವು ಸಾಧಿಸಿದ್ದಾರೆ.

error: Content is protected !! Not allowed copy content from janadhvani.com