janadhvani

Kannada Online News Paper

ಕರ್ನಾಟಕ ವಿಧಾನಸಭಾ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಗೆಲುವು- ಬಿಜೆಪಿಗೆ ಹೀನಾಯ ಸೋಲು

ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ನಡೆದಿರುವ ಈ ಚುನಾವಣೆಯ ಫಲಿತಾಂಶ ರಾಜ್ಯ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಭರ್ಜರಿ ಬಹುಮತ ಪಡೆದಿದೆ. ಬಿಜೆಪಿ ಹೀನಾಯ ಸೋಲು ಕಂಡಿದ್ದು, 65 ಸ್ಥಾನಕ್ಕೆ ಸೀಮಿತವಾಗಿದೆ. ಕಾಂಗ್ರೆಸ್‌ 136 ಕ್ಷೇತ್ರಗಳನ್ನು ಗೆದ್ದಿದ್ದು, ಜೆಡಿಎಸ್‌ 19, ಇತರರು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷಗಳ ನಡುವಿನ ಭಾರಿ ಹಣಾಹಣಿ, ಅಬ್ಬರದ ಪ್ರಚಾರ, ಪ್ರತಿಷ್ಠೆಯನ್ನೇ ಪಣವಾಗಿಟ್ಟು ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 3.67 ಕೋಟಿ ಮತದಾರರು ನೀಡಿರುವ ಜನಾದೇಶ ಬಹಿರಂಗವಾಗಿದೆ. ಈ ಮೂರು ಪಕ್ಷಗಳ ಜೊತೆಗೇ ಎಎಪಿ, ಬಿಎಸ್ ಪಿ ಮತ್ತು ನಟ ಉುಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕೂಡ ತಮ್ಮ ಅದೃಷ್ಟಪರೀಕ್ಷೆಗೆ ನಿಂತಿದ್ದಾರೆ.

ಪ್ರಮುಖವಾಗಿ ಲೋಕಸಭೆ ಚುನಾವಣೆಗೆ ಒಂದು ವರ್ಷ ಇರುವಾಗ ನಡೆದಿರುವ ಈ ಚುನಾವಣೆಯ ಫಲಿತಾಂಶ ರಾಜ್ಯ ಮಾತ್ರವಲ್ಲ, ದೇಶದ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದ್ದು, ಈ ಕಾರಣಕ್ಕೆ, ಫಲಿತಾಂಶ ಇಡೀ ದೇಶದ ಗಮನ ಸೆಳೆದಿದೆ.

ವಿಧಾನಸಭೆಯ 224 ಕ್ಷೇತ್ರಗಳ ಪ್ರತಿನಿಧಿಗಳ ಆಯ್ಕೆಗೆ ಬುಧವಾರ (ಏಪ್ರಿಲ್‌ 10) ಮತದಾನ ನಡೆದಿತ್ತು. 5.07 ಕೋಟಿ ಮತದಾರರಲ್ಲಿ 3.67 ಕೋಟಿ ಮಂದಿ ಮತಚಲಾಯಿಸಿದ್ದರು. 2,615 ಅಭ್ಯರ್ಥಿಗಳು ಕಣದಲ್ಲಿದ್ದರು.

error: Content is protected !! Not allowed copy content from janadhvani.com