ರಿಯಾದ್: ಸೌದಿ ಅರೇಬಿಯಾಕ್ಕೆ ಕೆಲಸ, ಭೇಟಿ ಮತ್ತು ನಿವಾಸ ವೀಸಾಗಳನ್ನು ಇನ್ನು ಮುಂದೆ ಪಾಸ್‌ಪೋರ್ಟ್‌ನಲ್ಲಿ ಮುದ್ರಿಸಲಾಗುವುದಿಲ್ಲ. ಅನುಮತಿಸಿದ ವೀಸಾದ ಕ್ಯೂಆರ್ ಕೋಡ್ ಅನ್ನು ನಿಖರವಾಗಿ ಓದಲು ಸಾಧ್ಯವಾಗುವ ರೀತಿಯಲ್ಲಿ ಮುದ್ರಿತ ಕಾಗದದೊಂದಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಿಗೆ ಯಾತ್ರಾನುಮತಿ ನೀಡಬೇಕೆಂದು ವಿಮಾನ ಕಂಪೆನಿಗಳಿಗೆ, ಸೌದಿ ಅಥಾರಿಟಿ ಆಫ್ ಜನರಲ್ ಏವಿಯೇಷನ್ (GACA) ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೊಸ ವ್ಯವಸ್ಥೆಯು ಮೇ 1, 2023 ರಿಂದ ಜಾರಿಗೆ ಬರಲಿದೆ. ಭಾರತ ಸಹಿತ ಯುಎಇ, ಈಜಿಪ್ಟ್, ಜೋರ್ಡಾನ್, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಬಾಂಗ್ಲಾದೇಶದಿಂದ ಪ್ರಯಾಣಿಸುವವರಿಗೆ ಇದು ಅನ್ವಯಿಸುತ್ತದೆ.
ಪಾಸ್‌ಪೋರ್ಟ್‌ನಲ್ಲಿ ವೀಸಾ ಸ್ಟಾಂಪಿಂಗ್ ಮಾಡುವುದನ್ನು ನಿಲ್ಲಿಸಲಾಗಿದೆ. ಬದಲಾಗಿ, ವೀಸಾ ಮಾಹಿತಿಯೊಂದಿಗೆ ಕ್ಯೂಆರ್ ಕೋಡ್ ಹೊಂದಿರುವ ಎ-4 ಗಾತ್ರದ ಕಾಗದದಲ್ಲಿ ಮುದ್ರಿಸಿದ ವೀಸಾ ಪ್ರತಿಯಲ್ಲಿ ಪ್ರಯಾಣಿಸಬಹುದು. ಈ ಕೋಡನ್ನು ವಿಮಾನ ನಿಲ್ದಾಣಗಳಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ವಿಮಾನಯಾನ ಸಂಸ್ಥೆಗಳು ಈ ನಿರ್ಧಾರವನ್ನು ಪಾಲಿಸಬೇಕು, ತಪ್ಪಿದಲ್ಲಿ ಅದನ್ನು ಕಾನೂನಿನ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹೊಸ ಕ್ಯೂಆರ್ ಕೋಡ್ ವ್ಯವಸ್ಥೆಯ ಪರಿಚಯವು ಭಾರತ ಸೇರಿದಂತೆ ವಲಸಿಗರಿಗೆ ಸಾಕಷ್ಟು ಅನುಕೂಲವಾಗಿ ಪರಿಣಮಿಸಲಿದೆ. ಸಂದರ್ಶಕ ವೀಸಾಗೆ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ವೀಸಾ ಲಭ್ಯವಾಗಿದ್ದರೂ, ವೀಸಾ ಸ್ಟಾಂಪಿಂಗ್ ಗಾಗಿ ದಿನಗಟ್ಟಲೆ ಕಾಯಬೇಕಾಗಿತ್ತು.
ಪ್ರಸ್ತುತ, ಸೌದಿ ಅರೇಬಿಯಾಕ್ಕೆ ಉಮ್ರಾ ಮತ್ತು ಪ್ರವಾಸೋದ್ಯಮದಂತಹ ಆನ್‌ಲೈನ್ ವೀಸಾಗಳನ್ನು ಈಗಾಗಲೇ ಎ 4 ಪೇಪರ್‌ನಲ್ಲಿ ಸ್ಟಾಂಪಿಂಗ್ ಇಲ್ಲದೆ ನೀಡಲಾಗುತ್ತಿದೆ. ಆದಾಗ್ಯೂ, ಎಲ್ಲಾ ಇತರ ವೀಸಾಗಳನ್ನು ಸೌದಿ ಕಾನ್ಸುಲೇಟ್ ಅಥವಾ ರಾಯಭಾರ ಕಚೇರಿಗೆ ಪಾಸ್‌ಪೋರ್ಟ್ ಸಲ್ಲಿಸಿ, ಸ್ಟಾಂಪ್ ಮತ್ತು ಸ್ಟಿಕ್ಕರ್ ಅನ್ನು ಅಂಟಿಸುವ ಮೂಲಕ ನೀಡಲಾಗುತ್ತಿತ್ತು. ಆದರೆ, ಹೊಸ ಅಪ್ ಡೇಟ್ ಪ್ರಕಾರ ಎಲ್ಲವೂ ಆನ್ ಲೈನ್ ಆಗಲಿದೆ ಎಂದು ತಿಳಿದುಬಂದಿದೆ.