janadhvani

Kannada Online News Paper

ನೆಟ್ಟಾರು ಹತ್ಯೆ: ವೈರಲ್ ಧ್ವನಿ ಸಂದೇಶ ಬಗ್ಗೆ ಸಮಗ್ರ ತನಿಖೆ ನಡೆಯಲಿ- ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ

ಧ್ವನಿ ಸಂದೇಶದ ಹಿಂದಿನ ವಾಸ್ತವ ಸತ್ಯವನ್ನು ಉನ್ನತ ಮಟ್ಟದ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು

ಮಂಗಳೂರು: ಇತ್ತೀಚೆಗೆ ಕರ್ನಾಟಕ ರಾಜ್ಯಾದ್ಯಂತ, ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಸಂಚಲನವನ್ನೇ ಸೃಷ್ಟಿಸಿದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಿ ಧ್ವನಿ ಸಂದೇಶವೊಂದು ಹರಿದಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಗ್ರಹಿಸಿದ್ದಾರೆ.

ಇಡೀ ರಾಜ್ಯದಲ್ಲಿಯೇ ಕಾನೂನು ಸುವ್ಯವಸ್ಥೆಯ ವ್ಯತ್ಯಯ, ಮತೀಯ ದ್ರುವೀಕರಣ, ನಿರ್ಧಿಷ್ಟ ರಾಜಕೀಯ ಪಕ್ಷದ ನಾಯಕರ ಬಂಧನಗಳಿಗೆ ಕಾರಣವಾದ ಸುಳ್ಯದ ಪ್ರವೀಣ್ ನೆಟ್ಟಾರುವಿನ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದ ಮಹತ್ವದ ಸುಳಿವು ಎಂಬ ರೀತಿಯಲ್ಲಿ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಸದ್ರಿ ಧ್ವನಿ ಸುರುಳಿಯಲ್ಲಿನ ಮಾಹಿತಿ ಪ್ರಕಾರ ಪ್ರವೀಣ್ ನೆಟ್ಟಾರುವಿನ ಹತ್ಯೆಯ ರೂವಾರಿಗಳು ಜಿಲ್ಲೆಯ ಪ್ರಮುಖ ರಾಜಕೀಯ ಪ್ರತಿನಿಧಿಗಳು ಎಂದು ನಂಬುವ ರೀತಿಯಲ್ಲಿದೆ.

ಸದ್ರಿ ಘಟನೆಯಿಂದಾಗಿ ಅಂದು ಜಿಲ್ಲೆ ಮತ್ತು ರಾಜ್ಯಕ್ಕೆ ಪರೋಕ್ಷವಾಗಿ ಆದ ನಷ್ಟ ಸಾಧಾರಣದ್ದಲ್ಲ. ಈ ಹತ್ಯೆಗೆ ಪ್ರತಿಯಾಗಿ ಭಿನ್ನ ಧರ್ಮದ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ. ಪರಿಹಾರ ಹಂಚುವುದರಿಂದ ಹಿಡಿದು ಹೇಳಿಕೆ ನೀಡುವ ಹಂತದವರೆಗೂ ಸರಕಾರ ಧಾರ್ಮಿಕ ತಾರತಮ್ಯ ಪ್ರದರ್ಶಿಸಿದೆ. ಒಂದೊಮ್ಮೆ ಈ ಘಟನೆ ಸರಕಾರಿ ಪ್ರಾಯೋಜಿತ ಕೃತ್ಯ ಆಗಿರುವ ದೃಢವಾದ ಸಂಶಯವೂ ಎದ್ದು ಕಾಣುತ್ತಿದೆ.

ಆದುದರಿಂದ ಪ್ರಸ್ತುತ ವ್ಯಾಪಕ ವೈರಲ್ ಆಗುತ್ತಿರುವ ದ್ವನಿ ಸಂದೇಶದ ಸತ್ಯಾ ಸತ್ಯತೆಯನ್ನು ಉನ್ನತಮಟ್ಟದ ಪೊಲೀಸು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಬೇಕಾಗುತ್ತದೆ. ಸಾರ್ವಜನಿಕರಿಗೆ ಇಂತಹ ಗೊಂದಲಕಾರಿ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳ ಸೃಷ್ಟಿಯಾಗಿದೆ. ಪೊಲೀಸು ಇಲಾಖೆ ತಮ್ಮ ಕರ್ತವ್ಯದ ಪ್ರಾಮುಖ್ಯತೆಯನ್ನು ಆರಿತು ಧ್ವನಿ ಸಂದೇಶದ ಹಿಂದಿನ ವಾಸ್ತವ ಸತ್ಯವನ್ನು ಉನ್ನತ ಮಟ್ಟದ ನ್ಯಾಯಾಧೀಶರ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com