ದುಬೈ: ದುಬೈನ ಅದ್ಭುತ ಮತ್ತು ಮನರಂಜನಾ ಕೇಂದ್ರಗಳನ್ನು ಭೇಟಿ ಮಾಡಲು ಹೊಸ ‘ದುಬೈ ಪಾಸ್’ ಸೌಲಭ್ಯವನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.
ದುಬೈಯಲ್ಲಿನ 33 ಪ್ರಮುಖ ಆಕರ್ಷಣಾ ಕೇಂದ್ರಗಳ ಭೇಟಿಗೆ ಇನ್ನುಮುಂದೆ ಈ ‘ದುಬೈ ಪಾಸ್ ‘ ಎನ್ನುವ ಒಂದೇ ಪಾಸ್ ಸಾಕಾಗಲಿದೆ.ದುಬೈ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ಅರೇಬಿಯನ್ ಟ್ರಾವೆಲ್ ಮಾರ್ಕೆಟ್ನಲ್ಲಿ ದುಬೈ ಪ್ರವಾಸೋದ್ಯಮ ಇಲಾಖೆಯು ಈ ಬಗ್ಗೆ ಘೋಷಣೆ ಮಾಡಿದೆ.
ದುಬೈ ಪಾಸ್ ಮೇ 16 ರಿಂದ ಲಭ್ಯವಾಗಲಿದ್ದು, ಪಾಸ್‌ನಲ್ಲಿ ದುಬೈ ಸೆಲೆಕ್ಟ್ ಮತ್ತು ದುಬೈ ಅನ್ ಲಿಮಿಟೆಡ್ ಎನ್ನುವ ಎರಡು ಬಗೆಯ ಪ್ಯಾಕೇಜುಗಳು ಲಭ್ಯವಿದೆ.
ಬುರ್ಜ್ ಖಲೀಫಾ, ವೈಲ್ಡ್ ವಾದಿ ವಾಟರ್ ಪಾರ್ಕ್, ಡೆಸರ್ಟ್ ಸಫಾರಿ, ಐಫ್ಲೈ, ಐಎಂಜಿ. ವರ್ಲ್ಡ್, ಲೆಗೋ ಲಾಂಡ್, ಮೋಶನ್ ಗೇಟ್, ಸ್ಕೀ ದುಬೈ, ಬಾಲಿವುಡ್ ಪಾರ್ಕ್ಸ್, ದುಬೈ ಅಕ್ವೇರಿಯಮ್, ದುಬೈ ಸಫಾರಿ, ವಂಡರ್ ಬಸ್, ಡಾಲ್ಫಿನೇರಿಯಮ್ ಮತ್ತು ದುಬೈ ಫ್ರೇಮ್ ಮುಂತಾದವುಗಳನ್ನು ದುಬೈ ಪಾಸ್ ಮೂಲಕ ಭೇಟಿ ಮಾಡಬಹುದು.
www.iventurecard.com/ae ವೆಬ್‌ಸೈಟ್ ನಿಂದ ನೀವು ದುಬೈ ಪಾಸನ್ನು ಖರೀದಿಸಬಹುದು. ನಿಮ್ಮ ಇ-ಮೇಲ್ ಮತ್ತು ಆಯ್ದ ಕೇಂದ್ರಗಳಲ್ಲಿ ಖುದ್ದಾಗಿ ಪಾಸ್ ಪಡೆಯ ಬಹುದಾಗಿದೆ.ಪಾಸ್ ಮುಖಾಂತರ ಆಯ್ದ ಪ್ಯಾಕೇಜ್ ಅನುಸಾರ ಮುಖ್ಯ ಆಕರ್ಷಣಾ ಕೆಂದ್ರಗಳನ್ನು ಕಾಣಲು ಸಾಧ್ಯವಿದೆ.
ದುಬೈ ಸೆಲೆಕ್ಟ್: ಹೆಸರೇ ಸೂಚಿಸುವಂತೆ ಮೂರು ವಿಭಾಗಗಳಿಂದ ಆಯ್ಕೆ ಮಾಡಿದ ಮನರಂಜನೆಗಳು ಅಥವಾ ಕಾರ್ಯಕ್ರಮಗಳ ಸಂದರ್ಶನಕ್ಕೆ ಇದು ಅನುವು ಮಾಡಿ ಕೊಡಲಿದೆ. ಪ್ರತೀ ವಿಭಾಗದಿಂದ ಒಂದು ಮನರಂಜನೆ ಅಥವಾ ಕಾರ್ಯಕ್ರಮವನ್ನು ಆಯ್ಕೆ ಮಾಡಬಹುದು,ದುಬೈ ಸೆಲೆಕ್ಟ್ ಗೆ ಏಳು ದಿನಗಳ ವಾಯ್ದೆ ಇದೆ.ವಯಸ್ಕರಿಗೆ 399 ದಿರ್ಹಂಗಳಾದರೆ,ಮಕ್ಕಳಿಗೆ 389 ದಿರ್ಹಮ್ ದರ ನಿಗದಿ ಪಡಿಸಲಾಗಿದೆ.
ದುಬೈ ಅನ್ ಲಿಮಿಟೆಡ್: ಇದರ ಮಾನ್ಯತೆ ಮೂರು ದಿನಗಳಾಗಿವೆ. ದುಬೈಯ 33 ಪ್ರವಾಸಿ ತಾಣಗಳು ಮತ್ತು ಆಕರ್ಷಣಾ ಕೆಂದ್ರಗಳಿಗೆ ಭೇಟಿ ನೀಡುವ ವಿಶಿಷ್ಟ ಆಯ್ಕೆಯಾಗಿದೆ.ಈ ಪಾಸ್‌ಗೆ ವಯಸ್ಕರಿಗೆ 899 ದಿರ್ಹಂ ಮತ್ತು ಮಕ್ಕಳಿಗೆ 846 ದಿರ್ಹಂ ಶುಲ್ಕವಿದೆ.