ಬೆಂಗಳೂರು: ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ ನಡೆದುಕೊಂಡರೆ ಕೇವಲ ಅಮಾನತಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು. ಈ ಕುರಿತು ವಜಾ ಮಾಡಲು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಮರಣದ ದುರ್ಘಟನೆ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತರಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ನತದೃಷ್ಟ ಹೆಣ್ಣುಮಗಳನ್ನು ಬಾಲಕಿಯರ ಮಂದಿರಕ್ಕೆ ದಾಖಲಿಸಲಾಗಿದೆ. ಆಕೆಗೆ ಸರ್ಕಾರದಿಂದಲೇ 5 ಲಕ್ಷ ರೂ. ಎಫ್‌ಡಿ ಇರಿಸಲು ಕ್ರಮ ವಹಿಸಲಾಗಿದೆ. ಹಾಗೆಯೇ ಆಕೆಯ ಶೈಕ್ಷಣಿಕ ಭವಿಷ್ಯವನ್ನೂ ರೂಪಿಸಲಾಗುವುದು. ಈ ಘಟನೆಯಲ್ಲಿ ಅಮಾನವೀಯವಾಗಿ ನಡೆದುಕೊಂಡ ವೈದ್ಯರು, ಸಿಬ್ಬಂದಿಗೆ ಹಾಗೂ ಜಿಲ್ಲಾ ಸರ್ಜನ್ ಗೆ, ಆಡಳಿತ ವೈಫಲ್ಯ ಎಂದು ಪರಿಗಣಿಸಿ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕರ್ತವ್ಯದಲ್ಲಿರುವ ವೈದ್ಯರಿಗೆ ಕೂಡ ಪ್ರಕರಣದ ಗಂಭೀರತೆ ಬಗ್ಗೆಯೂ ತಿಳಿಸಲಾಗಿದೆ. ಹಾಗೆಯೇ ಅವರಿಗೂ ಶೋಕಾಸ್ ನೋಟಿಸ್ ನೀಡಿ 24 ಗಂಟೆಯೊಳಗೆ ಉತ್ತರ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ರೀತಿಯ ಘಟನೆ ಎಂದೂ ಮರುಕಳಿಸಬಾರದು. ಅದಕ್ಕಾಗಿ ಎಲ್ಲಾ ಕ್ರಮಗಳನ್ನು ವಹಿಸಲಾಗಿದೆ. ಯಾವುದೇ ರೋಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದಾಗ ಯಾವ ದಾಖಲೆಗಳೂ ಮುಖ್ಯವಲ್ಲ. ತಾಯಿ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಚಿಕಿತ್ಸೆ ನೀಡಿದ ಬಳಿಕವೂ ಕೇಳಬಹುದು. ಈ ಬಗ್ಗೆ ಹಿಂದಿನಿಂದಲೂ ಸೂಚನೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 76 ತುರ್ತು ಸೇವೆಗಳನ್ನು ಜೋಡಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೇವೆಗಳು ಇಲ್ಲವಾದರೆ, ಖಾಸಗಿ ಆಸ್ಪತ್ರೆಯಲ್ಲಿ ಆ ಸೇವೆ ಪಡೆಯಬಹುದು. ಆಗ ಸರ್ಕಾರವೇ ವೆಚ್ಚ ಭರಿಸುತ್ತದೆ ಎಂದರು.
ಕರಾಳ ಘಟನೆ
ಎಲ್ಲಾ ಸೌಲಭ್ಯಗಳು ಇದ್ದರೂ, ಆರೋಗ್ಯ ಸಿಬ್ಬಂದಿ ಮಾಡಿದ ಕೆಲಸದಿಂದ ಸರ್ಕಾರಕ್ಕೆ ಮುಜುಗರವಾಗಿದೆ. ಇದು ಇಡೀ ಮಾನವ ಸಂಕುಲಕ್ಕೆ ಕರಾಳ ದಿನವಾಗಿದೆ. ಇದಕ್ಕಾಗಿ ನಾನು ಬಹಳ ವಿಷಾದ, ಸಹಾನುಭೂತಿ ವ್ಯಕ್ತಪಡಿಸುತ್ತೇನೆ ಎಂದರು.
ಈ ಕುಟುಂಬದ ಸಂಬಂಧಿಕರನ್ನು ಪತ್ತೆ ಮಾಡಲು 36 ಗಂಟೆಗಳಿಂದ ಪೊಲೀಸರು ಶ್ರಮಿಸುತ್ತಿದ್ದಾರೆ. ಆದರೆ ಯಾರೂ ಇನ್ನೂ ಮುಂದೆ ಬಂದಿಲ್ಲ. ಇಂತಹ ಪರಿಸ್ಥಿತಿ ಇದ್ದರೂ, ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಲಿದೆ ಎಂದರು.
ಗರ್ಭಿಣಿ ಯಾವುದೇ ರಾಜ್ಯದವರಾಗಿದ್ದರೂ, ದಾಖಲೆ ಇಲ್ಲದಿದ್ದರೂ ಆಸ್ಪತ್ರೆಗೆ ಬಂದಾಗ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಬೇಕಿತ್ತು. ಮಾನವೀಯತೆಯಿಂದ ಅವರೊಂದಿಗೆ ನಡೆದುಕೊಳ್ಳಬೇಕಿತ್ತು.ಇಲ್ಲಿ ದಾಖಲೆ ಮುಖ್ಯವಲ್ಲ, ಜೀವ ಮುಖ್ಯ. ಕೆಲವರಿಂದ ಆದ ಈ ಘಟನೆಯಿಂದ ಇಡೀ ವ್ಯವಸ್ಥೆಗೆ ಕೆಟ್ಟ ಹೆಸರು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು