janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಅಬುಧಾಬಿಯಲ್ಲಿ ಬೃಹತ್ ಮೀಲಾದ್ ಸಮಾವೇಶ

ಪ್ರವಾದಿ ಪ್ರೇಮವನ್ನು ಗ್ರಹಿಸಲು ಪರಿಶುದ್ಧ ಹೃದಯ ಅವಶ್ಯಕ – ಯುವ ಸುನ್ನಿ ನಾಯಕ ಅನಸ್ ಅಮಾನಿ ಕಿವಿಮಾತು

ಕನ್ನಡಿಗರ ಬೃಹತ್ ಹೊರನಾಡ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್
(ಕೆ.ಸಿ.ಎಫ್ )ವತಿಯಿಂದ ದಿನಾಂಕ 16.10.2022 ರಂದು ಬೃಹತ್ ಮೀಲಾದ್ ಸಮಾವೇಶ ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು. ಸಂಜೆ 05.30ಕ್ಕೆ ಬುರ್ದಾ ಹಾಡಿನಿಂದ ಆರಂಭಗೊಂಡ ಕಾರ್ಯಕ್ರಮವು ರಾತ್ರಿ 10.30 ಕ್ಕೆ ಭಕ್ತಿಪೂರ್ವಕ ಪ್ರಾರ್ಥನೆಯೊಂದಿಗೆ ಕೊನೆಗೊಂಡಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಯುವ ಸುನ್ನಿ ಪಂಡಿತ ಅನಸ್ ಅಮಾನಿ ಕಣ್ಣೂರು ರವರು ತನ್ನ ಮುಖ್ಯ ಪ್ರಭಾಷಣದಲ್ಲಿ ಪ್ರವಾದಿ ಪ್ರೇಮವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಬಗ್ಗೆ ಅರ್ಥವತ್ತಾಗಿ ವಿವರಿಸಿದರು. ಯು. ಎ .ಇ ಯಾದ್ಯಂತ ಇರುವ ಸುಮಾರು ಒಂದು ಸಾವಿರಕ್ಕೂ ಅಧಿಕ ಕನ್ನಡಿಗ ಅಭಿಮಾನಿಗಳು ಮತ್ತು ವಿಶ್ವಾಸಿಗಳು ಈ ಪುಣ್ಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮೌಲಿದ್ ಪಾರಾಯಣ ದೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮಕ್ಕೆ ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಹಸೈನಾರ್ ಅಮಾನಿ ಅತಿಥಿಗಳನ್ನು ಸ್ವಾಗತಿಸಿದರು.ಕೆಸಿಎಫ್ ಅಂತಾರಾಷ್ಟ್ರೀಯ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಕೆಸಿಎಫ್ ಸಂಘಟನೆಯ ಕಾರ್ಯವೈಖರಿಗಳನ್ನು ಚುಟುಕಾಗಿ ವಿವರಿಸಿದರು, ಮಸ್ದರ್ ಶಿಕ್ಷಣ ಸಂಸ್ಥೆಗಳ ಸಾರಥಿ ಸುಫ್ಯಾನ್ ಸಖಾಫಿ ಕೆ ಸಿ ಎಫ್ ನ ಇಹ್ಸಾನ್ ವಿಭಾಗ ನಡೆಸುವ ಶಿಕ್ಷಣ ಕ್ರಾಂತಿಯ ಬಗ್ಗೆ ಹೃಸ್ವವಾಗಿ ವಿವರಿಸಿದರು,

ವೇದಿಕೆಯಲ್ಲಿ ಐ.ಸಿ .ಎಫ್ ಅಧ್ಯಕ್ಷರಾದ ಹಂಝ ಅಹ್ಸನಿ, ಐ.ಸಿ .ಎಫ್ ಕಾರ್ಯದರ್ಶಿ ಪರಪ್ಪ ಹಮೀದ್ ಸಾಹೇಬ್, ಕೆಸಿಎಫ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪಿ ಎಂ ಎಚ್ ಅಬ್ದುಲ್ ಹಮೀದ್ ಈಶ್ವರಮಂಗಿಲ ಉಪಸ್ಥಿತರಿದ್ದರು. ಈ ಮಧ್ಯೆ ಕೆಸಿಎಫ್ ಹಿರಿಯ ಸಕ್ರಿಯ ಕಾರ್ಯಕರ್ತರಾದ ಯೂಸಫ್ ಅನಿಲಕಟ್ಟೆ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ನಾಯಕರಾದ ಇಬ್ರಾಹಿಂ ಬ್ರೈಟ್ ಮಾರ್ಬಲ್, ಕೆ.ಎಚ್ ಸಖಾಫಿ, ,ಮನ್ಸೂರ್ ಚಿಕ್ಕ ಮಂಗಳೂರು, ಹಕೀಮ್ ತುರ್ಕಳಿಕೆ ಸಹಕರಿಸಿದರು. ಕಾರ್ಯಕ್ರಮವು ಸಯ್ಯದ್ ಮುಸ್ತಫಾ ಮಿಸ್ಬಾಹಿ ತಂಗಳ್ ರವರ ಭಕ್ತಿ ಪೂರ್ವಕ ದುಆ ದೊಂದಿಗೆ ಕೊನೆಗೊಂಡಿತು.

ಸಂಘಟನಾ ಅಧ್ಯಕ್ಷರಾದ ಹಾಫಿಲ್ ಸಯೀದ್ ಹನೀಫಿ ಕಾರ್ಯಕ್ರಮವನ್ನು ನಿರ್ವಹಿಸಿ , ಕೊನೆಯಲ್ಲಿ ಕೆಸಿಎಫ್ ಕಾರ್ಯದರ್ಶಿ ಕಬೀರ್ ಬಾಯಂಬಾಡಿ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಎನ್. ಕೆ ಸಿದ್ದೀಕ್ ಅಳಿಕೆ ನೇತೃತ್ವದ ಸ್ವಯಂ ಸೇವಕರ ಪಾತ್ರ ಶ್ಲಾಘನೀಯವಾಗಿತ್ತು.

error: Content is protected !! Not allowed copy content from janadhvani.com