janadhvani

Kannada Online News Paper

ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಕರೆ ನೀಡಿದ್ದ ಕೇರಳ ಬಂದ್- ವ್ಯಾಪಕ ಹಿಂಸಾಚಾರ

ವಿಮಾನ ನಿಲ್ದಾಣಗಳಿಗೆ ತೆರಳುತ್ತಿದ್ದ ವಾಹನಗಳ ಮೇಲೂ ಕಲ್ಲು ತೂರಾಟ

ತಿರುವನಂತಪುರ: ದೇಶಾದ್ಯಂತ ನಡೆದ ಎನ್‌ಐಎ(NIA), ಇ.ಡಿ(ED) ದಾಳಿ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಕರೆ ನೀಡಿರುವ ಕೇರಳ ಬಂದ್ ಹಿಂಸಾರೂಪಕ್ಕೆ ತಿರುಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿದ್ದು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ಧ್ವಂಸಗೊಂಡಿದೆ.

ಹರತಾಳದ ವೇಳೆ ಇಡೀ ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಘಟನೆಗಳಲ್ಲಿ 220 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಹಿಂಸಾಚಾರದ ಆರೋಪಿಗಳು ಮತ್ತು ಪೂರ್ವಭಾವಿ ಬಂಧನದಲ್ಲಿರುವವರು ಸೇರಿದ್ದಾರೆ.

ವಿವಿಧೆಡೆ ನಡೆದ ಹಿಂಸಾಚಾರದಿಂದ ಕೆಎಸ್‌ಆರ್‌ಟಿಸಿಗೆ 42 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. 70 ಬಸ್‌ಗಳಿಗೆ ಹಾನಿಯಾಗಿದೆ. ಎಂಟು ಚಾಲಕರು, ಇಬ್ಬರು ಕಂಡಕ್ಟರ್‌ಗಳು ಮತ್ತು ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ. ತಪ್ಪಿತಸ್ಥರಿಂದ ಪರಿಹಾರವನ್ನು ವಸೂಲಿ ಮಾಡಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ತಿಳಿಸಿದ್ದಾರೆ.

ತಿರುವನಂತಪುರಂ ಮತ್ತು ಕಣ್ಣೂರಿನಲ್ಲಿ ವಿಮಾನ ನಿಲ್ದಾಣಗಳಿಗೆ ತೆರಳುತ್ತಿದ್ದ ವಾಹನಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಕೊಲ್ಲಂ ಜಿಲ್ಲೆಯಲ್ಲಿ, ದ್ವಿಚಕ್ರ ವಾಹನದಲ್ಲಿ ಬಂದ ಪಿಎಫ್‌ಐ ಕಾರ್ಯಕರ್ತರು ಜನರನ್ನು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭ ಮಧ್ಯಪ್ರವೇಶಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ ಹಲ್ಲೆ ನಡೆಸಲಾಗಿದೆ.

ಕಣ್ಣೂರಿನ ನಾರಾಯಣಪಾರಾದಲ್ಲಿ ಬೆಳಿಗ್ಗೆ ದಿನಪತ್ರಿಕೆಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಲಪ್ಪುಳದಲ್ಲಿ ಕಲ್ಲು ತೂರಾಟ ನಡೆದಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳು, ಟ್ಯಾಂಕರ್ ಲಾರಿ ಮತ್ತು ಇತರ ಕೆಲವು ವಾಹನಗಳು ಜಖಂಗೊಂಡಿವೆ.

ಕಲ್ಲು ತೂರಾಟದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸಾರಿಗೆ ಬಸ್‌ಗಳನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಹಲವೆಡೆ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ, ಎನ್‌ಐಎ ಮತ್ತು ಇತರ ಏಜೆನ್ಸಿಗಳು ಗುರುವಾರ ಪಿಎಫ್‌ಐ ಕಚೇರಿಗಳು ಮತ್ತು ಸಂಬಂಧಿತ ವ್ಯಕ್ತಿಗಳ ನಿವಾಸಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪಿಎಫ್‌ಐ ಈ ಬಂದ್‌ಗೆ ಕರೆ ನೀಡಿದೆ.

ಈ ಮಧ್ಯೆ ಕೇರಳ ರಾಜ್ಯದಾದ್ಯಂತ ಭದ್ರತೆ ಹೆಚ್ಚಿಸಿರುವ ಪೊಲೀಸರು, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಭಯೋತ್ಪಾದನೆಗೆ ಕುಮ್ಮಕ್ಕು ಆರೋಪದಡಿ ದೆಶದ 11 ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿತ್ತು. 100ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಕೇರಳ ಒಂದರಲ್ಲಿ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

error: Content is protected !! Not allowed copy content from janadhvani.com