ಮಸ್ಕತ್: ಒಮಾನ್ನಲ್ಲಿ (Sultanate of Oman) ಪಾಸ್ಪೋರ್ಟ್ನಲ್ಲಿ ನವೀಕರಿಸಿದ ವೀಸಾವನ್ನು ಸ್ಟ್ಯಾಂಪ್ ಮಾಡುವುದು ಕಡ್ಡಾಯವಲ್ಲ ಎಂದು ರಾಯಲ್ ಒಮಾನ್ ಪೊಲೀಸರು (Royal Oman Police) ಹೇಳಿದ್ದಾರೆ. ಪಾಸ್ಪೋರ್ಟ್ನಲ್ಲಿರುವ ಸ್ಟ್ಯಾಂಪ್ಗೆ ಬದಲಾಗಿ, ಒಮಾನ್ನಲ್ಲಿ ನಿವಾಸ ಪರವಾನಗಿಯ ಅಧಿಕೃತ ದಾಖಲೆಯಾಗಿ ರೆಸಿಡೆಂಟ್ ಕಾರ್ಡ್ಗಳನ್ನು(Resident’s Card) ಪರಿಗಣಿಸಲಾಗುತ್ತದೆ ಎಂದು ಅಧಿಕೃತ ಸೂಚನೆಯಲ್ಲಿ ತಿಳಿಸಲಾಗಿದೆ.
ಒಮಾನ್ನಲ್ಲಿ ವೀಸಾ ನವೀಕರಣ ಪ್ರಕ್ರಿಯೆಯನ್ನು ಆನ್ಲೈನ್ಗೆ ವರ್ಗಾಯಿಸಿರುವ ಹಿನ್ನೆಲೆಯಲ್ಲಿ, ವೀಸಾ ಸ್ಟಾಂಪಿಂಗ್ ವಿಷಯದಲ್ಲಿ ಉಂಟಾದ ಗೊಂದಲಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಹೊಸ ರೀತಿಯಲ್ಲಿ ವೀಸಾವನ್ನು ಪಾಸ್ಪೋರ್ಟ್ನಲ್ಲಿ ಸ್ಟ್ಯಾಂಪ್ ಮಾಡಲಾಗಿದೆಯೇ ಎಂಬುದು ಪ್ರಸ್ತುತವಲ್ಲ. ಪರಿಷ್ಕೃತ ರೆಸಿಡೆಂಟ್ ಕಾರ್ಡ್ ಅನ್ನು ನಿವಾಸ ಪರವಾನಿಗೆ ದಾಖಲೆಯಾಗಿ ಪರಿಗಣಿಸಲಾಗುವುದು ಎಂದು ರಾಯಲ್ ಒಮಾನ್ ಪೊಲೀಸರು ತಿಳಿಸಿದ್ದಾರೆ.
ಆನ್ಲೈನ್ ವ್ಯವಸ್ಥೆಯು ವೀಸಾ ನವೀಕರಣ ಮತ್ತು ಪ್ರಯಾಣ ಪರವಾನಗಿಗೆ ಸಂಬಂಧಿಸಿದ ಕಾರ್ಯವಿಧಾನಗಳನ್ನು ಸರಾಗಗೊಳಿಸುವ ಗುರಿಯನ್ನು ಹೊಂದಿದೆ.
ಏತನ್ಮಧ್ಯೆ, ಇತರ ದೇಶಗಳಿಂದ ಒಮಾನಿಗೆ ಪ್ರಯಾಣಿಸುವ ವೇಳೆ ಪಾಸ್ಪೋರ್ಟ್ನಲ್ಲಿರುವ ವೀಸಾ ಸ್ಟ್ಯಾಂಪ್ಗೆ ಬದಲಾಗಿ ರೆಸಿಡೆಂಟ್ ಕಾರ್ಡ್ ಅನ್ನು ಅಧಿಕೃತ ನಿವಾಸ ಪರವಾನಗಿಯಾಗಿ ಪರಿಗಣಿಸುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.