ದುಬೈ: ನಕಲಿ ದಾಖಲೆಗಳೊಂದಿಗೆ ಪ್ರಯಾಣಿಸುವವರಿಗೆ ದುಬೈ ಇಮಿಗ್ರೇಷನ್ (Dubai Immigration) ಎಚ್ಚರಿಕೆ ನೀಡಿದೆ. ವೀಸಾ ಸೇರಿದಂತೆ ನಿಜವಾದ ಪ್ರಯಾಣ ದಾಖಲೆಗಳೊಂದಿಗೆ ಪ್ರಯಾಣಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಇತ್ತೀಚೆಗೆ ಹಲವಾರು ಪ್ರಯಾಣಿಕರು ನಕಲಿ ಪ್ರಯಾಣ ದಾಖಲೆಗಳೊಂದಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಕಳೆದ 20 ತಿಂಗಳಲ್ಲಿ ದುಬೈಗೆ ಆಗಮಿಸಿದ ಪ್ರಯಾಣಿಕರಿಂದ 1610 ನಕಲಿ ಪ್ರಯಾಣ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದುಬೈ ಎಮಿಗ್ರೇಷನ್ ಮುಖ್ಯಸ್ಥ ಲೆ. ಜನರಲ್ ಮುಹಮ್ಮದ್ ಅಹ್ಮದ್ ಅಲ್ ಮರ್ರಿ ಇದನ್ನು ಬಹಿರಂಗಪಡಿಸಿದ್ದಾರೆ.
ದಾಖಲೆ ಪರೀಕ್ಷಾ ಕೇಂದ್ರ ಮತ್ತು ತರಬೇತಿ ಪಡೆದ ಸಿಬ್ಬಂದಿಗಳ ಸಹಾಯದಿಂದ ನಕಲಿ ದಾಖಲೆಗಳನ್ನು ವಶಪಡಿಸಲಾಗಿದೆ. ನಕಲಿ ಪ್ರಯಾಣ ದಾಖಲೆಗಳನ್ನು ಪತ್ತೆ ಮಾಡುವುದು ಪಾಸ್‌ಪೋರ್ಟ್ ಅಧಿಕಾರಿಗಳ ಪ್ರಮುಖ ಕೆಲಸವಾಗಿದೆ.ಈ ವರ್ಷ ಆಗಸ್ಟ್‌ವರೆಗೆ 849 ನಕಲಿ ದಾಖಲೆಗಳು ಪತ್ತೆಯಾಗಿವೆ.
ದುಬೈ ವಿಮಾನ ನಿಲ್ದಾಣಗಳು ಪ್ರಯಾಣ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ನೂರಾರು ಉನ್ನತ ಅಧಿಕಾರಿಗಳನ್ನು ಹೊಂದಿವೆ. ಪಾಸ್‌ಪೋರ್ಟ್ ಅಧಿಕಾರಿಗಳಿಗೆ ನಿಯೋಜಿಸಲಾದ ಕರ್ತವ್ಯಗಳನ್ನು ದೋಷರಹಿತವಾಗಿ ನಿರ್ವಹಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ದುಬೈ ವಲಸೆ ಮುಖ್ಯಸ್ಥರು ಹೇಳಿದ್ದಾರೆ.
ವಿಶ್ವದ ವಿವಿಧ ದೇಶಗಳಿಂದ ದುಬೈಗೆ ಆಗಮಿಸುವವರನ್ನು ಆತ್ಮೀಯವಾಗಿ ಸ್ವಾಗತಿಸಲು ಸಮರ್ಥರಾಗಿರುವ ಅತ್ಯುತ್ತಮ ಸಿಬ್ಬಂದಿ ವರ್ಗವನ್ನು ದುಬೈ ವಿಮಾನ ನಿಲ್ದಾಣಗಳು ಹೊಂದಿದೆ ಎಂದು ಅವರು ಹೇಳಿದರು.


