ಲಂಡನ್: ಆಸಿಫಾ ಪ್ರಕರಣ ಖಂಡಿಸಿ ಮೋದಿಗೆ ‘ಗೋ ಬ್ಯಾಕ್’ ಕೂಗಿದ ಪ್ರತಿಭಟನಾಕಾರರು

ಲಂಡನ್: ಪ್ರಧಾನಿ ನರೇಂದ್ರ ಮೋದಿ  ಬುಧವಾರ ಲಂಡನ್‍ಗೆ ಬಂದಿಳಿದಾಗ ನೂರಾರು ಮಂದಿ ಪ್ರತಿಭಟನಾಕಾರರು ಪ್ಲೆಕಾರ್ಡ್ ಹಿಡಿದು ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ ಎಂದು ರಾಯಿಟರ್ಸ್ ಪತ್ರಿಕೆ ವರದಿ ಮಾಡಿದೆ.

ಬಾಲಕಿಯರ ಮೇಲೆ ಪೈಶಾಚಿಕ ರೀತಿಯಲ್ಲಿ ನಡೆದ ಅತ್ಯಾಚಾರ ಮತ್ತು  ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನಾಕಾರರು ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ವೀಡನ್​ ಮತ್ತು ಬ್ರಿಟನ್​ ರಾಷ್ಟ್ರಗಳ 5 ದಿನಗಳ ಪ್ರವಾಸದ ಅಂಗವಾಗಿ ಮೋದಿ ಲಂಡನ್‍ಗೆ ತೆರಳಿದ್ದರು.ಬ್ರಿಟನ್ ಪ್ರಧಾನಿ ತೆರೆಸಾ ಮೇ ಜತೆ ಮಾತುಕತೆ ನಡೆಸಲು ಮೋದಿ ಪಾರ್ಲಿಮೆಂಟ್‍ಗೆ ಆಗಮಿಸಿದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದು ನಿಂತ ಪ್ರತಿಭಟನಾಕಾರರು ‘Modi go home’ , ‘we stand against Modi’s agenda of hate and greed’ ಎಂದು ಬರೆದ ಪ್ಲೆಕಾರ್ಡ್ ಹಿಡಿದು ಪ್ರತಿಭಟಿಸಿದ್ದಾರೆ.

ಭಾರತದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ರಾಜಕೀಯ ಸಮಸ್ಯೆಯಾಗಿದೆ. ಹೀಗಿರುವಾಗ ಮಹಿಳೆಯರ ರಕ್ಷಣೆ ಕಲ್ಪಿಸುವುದರಲ್ಲಿ ಮೋದಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.ಇಷ್ಟೆಲ್ಲಾ ನಡೆಯುತ್ತಿದ್ದರೂ  ಭಾರತ ಸರ್ಕಾರ ಏನೂ ಮಾಡದೆ ಕುಳಿತಿದೆ. ಅನ್ಯಾಯಕ್ಕೀಡಾಗಿರುವ ಆ ಕುಟುಂಬಗಳ ಬಗ್ಗೆ ನಮಗೆ ಕನಿಕರವಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಅಧಿಕಾರದಲ್ಲಿದ್ದಾರೆ. ಆದರೆ ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಅವರು ಯಾವುದೇ ನೀತಿ ರಚಿಸಿಲ್ಲ ಎಂದು ಬ್ರಿಟನ್‍ನಲ್ಲಿ ನೆಲೆಸಿರುವ ಭಾರತ ಸಂಜಾತ ವಕೀಲ ನವಿಂದರ್ ಸಿಂಗ್ ಹೇಳಿದ್ದಾರೆ.

 

ಕೃಪೆ:ಪ್ರಜಾವಾಣಿ

Leave a Reply

Your email address will not be published. Required fields are marked *

error: Content is protected !!