janadhvani

Kannada Online News Paper

ಮತೀಯ ದ್ವೇಷ ಬಿಂಬಿತ ಹತ್ಯೆ, ಮುಸ್ಲಿಮ್ ಸಮುದಾಯದ ತೇಜೋವಧೆ- ಮುಸ್ಲಿಂ ಮುಖಂಡರ ಆಕ್ರೋಶ

ಮಸೂದ್ ಎಂಬ ವ್ಯಕ್ತಿಯ ಮನೆಗೆ ಭೇಟಿ ನೀಡದೆ ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸದೆ ಹಿಂತಿರುಗಿದ ಮಾನ್ಯ ಮುಖ್ಯಮಂತ್ರಿಯವರ ನಡೆಯು ವಿಷಾದಕರ ಮತ್ತು ಖಂಡನೀಯ
ಈ ವರದಿಯ ಧ್ವನಿಯನ್ನು ಆಲಿಸಿ

ಮಂಗಳೂರು,ಆಗಸ್ಟ್. 1: ಜಿಲ್ಲೆಯಲ್ಲಿ ಇತ್ತೀಚೆಗೆ ಮತೀಯ ದ್ವೇಷ ಬಿಂಬಿತ 3 ವ್ಯಕ್ತಿಗಳ ಹತ್ಯೆ ಮತ್ತು ಪರಿಣಾಮದ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ತೇಜೋವಧೆಗೊಳಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮುಸ್ಲಿಮ್ ಮುಖಂಡರು ಪತ್ರಿಕಾಗೋಷ್ಠಿ ಕರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಮಸೂದ್ ಎಂಬ ಯುವಕನ ಹತ್ಯೆ ಮತ್ತು ಅದರ ನಂತರದ ಸರ್ವ ಅಹಿತಕರ ಘಟನೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಈ ಘಟನೆ-ಕೃತ್ಯಗಳಿಂದಾದ ಸಾರ್ವಜನಿಕರ ಬದುಕು ದುಸ್ತರತೆ, ಶಾಂತಿಸುವ್ಯವಸ್ಥೆ ಭಂಗ ಇತ್ಯಾದಿಗಳನ್ನು ಮುಸ್ಲಿಮ್ ಸಮುದಾಯವು ಸಾಮೂಹಿಕವಾಗಿ ಮತ್ತು ಕಟು ಶಬ್ದಗಳಿಂದ ಖಂಡಿಸುತ್ತದೆ. ಯಾವ ಧರ್ಮವು ಇಂತಹ ಬೆಳವಣಿಗೆಗಳನ್ನು ಎಂದಿಗೂ ಸಹಿಸುವುದಿಲ್ಲ.

ತದನಂತರದ ಬೆಳವಣಿಗೆಗಳಲ್ಲಿ ನಿರ್ದಿಷ್ಟ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಎಂಬವರ ಹತ್ಯೆಯನ್ನು ದುಷ್ಕರ್ಮಿಗಳು ಎಸಗಿದ್ದಾರೆ. ಈ ಕೊಲೆಯನ್ನು ಕೂಡ ಮುಸ್ಲಿಮ್ ಸಮುದಾಯ ಕಟು ಶಬ್ದಗಳಲ್ಲಿ ಸಾಮೂಹಿಕವಾಗಿ ಸಮಾನವಾಗಿ ಖಂಡಿಸುತ್ತದೆ.

ಪ್ರವೀಣ್ ನೆಟ್ಟಾರು ಹತ್ಯೆಯ ನಂತರದ ಬೆಳವಣಿಗೆಗಳಲ್ಲಿ ಪೊಲೀಸ್‌ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಮ್ ಇರುವಾಗ ಶವ ಮೆರವಣಿಗೆಯ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಆರಾಧನಾ ಕೇಂದ್ರ, ಆಸ್ತಿ ಮತ್ತು ವಾಹನಗಳಿಗೆ ಹಾನಿಗೊಳಿಸಿದ್ದು ಖಂಡನೀಯ, ಇಂತಹ ಬೆಳವಣಿಗೆಗಳು ಮತೀಯ ಗಲಭೆಗೆ ಕುಮ್ಮಕ್ಕು ನೀಡುವಂತಿವೆ.

ಪ್ರವೀಣ್ ನೆಟ್ಟಾರು ಹತ್ಯೆಯ ನಂತರದ ಸಂತಾಪ ಭೇಟಿ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು, ಸಚಿವರು, ಸಂಸದರು ಮತ್ತು ಶಾಸಕರೆಲ್ಲರೂ ಪ್ರವೀಣ್ ನೆಟ್ಟಾರುರವರ ನಿವಾಸಕ್ಕೆ ಭೇಟಿ ನೀಡಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಮತ್ತು ಪರಿಹಾರ ನೀಡುವಿಕೆಯನ್ನು ಮುಸ್ಲಿಮ್ ಸಮುದಾಯವು ಗೌರವಿಸುತ್ತದೆ.

ಆದರೆ ಕೆಲವು ದಿನಗಳ ಹಿಂದೆ ಹತ್ಯೆಯಾದ ಮುಸ್ಲಿಮ್ ಸಮುದಾಯದ ಮಸೂದ್ ಎಂಬ ವ್ಯಕ್ತಿಯ ಮನೆಗೆ ಭೇಟಿ ನೀಡದೆ ಮೃತರ ಕುಟುಂಬಕ್ಕೆ ಸಾಂತ್ವನ ಸೂಚಿಸದೆ ಹಿಂತಿರುಗಿದ ಮಾನ್ಯ ಮುಖ್ಯಮಂತ್ರಿಯವರ ನಡೆಯು ವಿಷಾದಕರ ಮತ್ತು ಖಂಡನೀಯ, ರಾಜ್ಯದ ಏಳು ಕೋಟಿ ಜನರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು, ಸರ್ವರ ಮುಖ್ಯಮಂತ್ರಿಯಾಗಿದ್ದಾರೆ. ಅವರು ರಾಜ್ಯದ ಉನ್ನತ ಹುದ್ದೆಯ ಜವಾಬ್ದಾರಿ ಅರಿಯಬೇಕಿತ್ತು ಮತ್ತು ಮಡಿದವನ ಧರ್ಮ ನೋಡಿ ಪ್ರತಿಕ್ರಿಯೆ ನೀಡುವ ಮತ್ತು ಸ್ಪಂದಿಸುವ ಮುಖ್ಯಮಂತ್ರಿ ಆಗಬಾರದಿತ್ತು. ರಾಜಧರ್ಮ ಪಾಲಿಸುವಲ್ಲಿ ಅವರು ವಿಫಲರಾಗಿರುತ್ತಾರೆ. ಈ ನಡೆಯು ಜನಪ್ರತಿನಿಧಿಗಳು ನ್ಯಾಯ-ನೀತಿ ಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧರಾಗಿರುವುದಾಗಿ ಕೈಗೊಳ್ಳುವ ಪ್ರತಿಜ್ಞೆಗೆ ವಿರುದ್ಧವಾಗಿದ್ದು, ಇದು ಪ್ರಜಾಪ್ರಭುತ್ವದ ಬೆಳವಣಿಗೆಗೆ ತೀವ್ರ ಆತಂಕಕಾರಿ ಮತ್ತು ಗಂಡಾಂತರವಾಗಲಿದೆ.

ಈ ಹಿಂದೆ ವಿವಿಧ ಘಟನೆಗಳಲ್ಲಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಯವರು, ದುಷ್ಕರ್ಮಿಗಳ ಕೃತ್ಯಗಳನ್ನು ಕಾನೂನಾತ್ಮಕವಾಗಿ ತಡೆಯುವ ಬದಲು, ಕ್ರಿಯೆಗೆ ಪ್ರತಿಕ್ರಿಯೆ ಎಂಬ ಬೇಜವಾಬ್ದಾರಿಯುತ ಮಾತುಗಳನ್ನಾಡಿದ್ದಕ್ಕೆ ಪೂರಕವಾಗಿ ಅವರು ಪ್ರವೀಣ್ ನೆಟ್ಟಾರು ಕೊಲೆಯ ನಂತರ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಸೂಚಿಸಿ ಹಿಂದಿರುಗಿ ಬೆಂಗಳೂರು ತಲುಪುವ ಮುಂಚೆಯೇ ಸುರತ್ಕಲ್‌ನಲ್ಲಿ ಮಂಗಳ ಪೇಟೆಯ ಯುವಕ ಫಾಝಿಲ್‌ನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದು, ಇದನ್ನು ಮುಸ್ಲಿಮ್ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.

ಸುರತ್ಕಲ್ ಫಾಝಿಲ್ ಕೊಲೆಯನ್ನು ದುಷ್ಕರ್ಮಿಗಳು ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕೋಮು ಮನಃಸ್ಥಿತಿಯ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆ, ಮುಸ್ಲಿಮ್ ಸಮುದಾಯದ ಮೇಲಿನ ಜನಾಂಗೀಯ ದ್ವೇಷದ ಕಾರಣಕ್ಕಾಗಿ ಕೋಮುಶಕ್ತಿಗಳು ಎಸಗಿರುವ ಕೃತ್ಯವಾಗಿದೆ. ಇದು ಖಂಡನೀಯ. ಈ ಕೃತ್ಯಕ್ಕೆ ಮುಖ್ಯಮಂತ್ರಿಯವರು ನೇರ ಹೊಣೆಗಾರರಾಗಿರುತ್ತಾರೆ.

ಸನ್ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿಯವರು ಜಿಲ್ಲೆಯಲ್ಲಿ ನಡೆದ ಈ ಕೊಲೆಗಳನ್ನು ಗಂಭೀರವಾಗಿ ಪರಿಗಣಿಸಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರು ಮತ್ತು ಫಾಝಿಲ್ ಕುಟುಂಬಕ್ಕೆ ಪರಿಹಾರ ಘೋಷಿಸಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಮಾತ್ರ 25 ಲಕ್ಷ ರುಪಾಯಿ ಪರಿಹಾರ ಘೋಷಿಸಿ, ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೆ ಸಾಂತ್ವನ ಭೇಟಿ ಕೂಡಾ ಮಾಡದೆ, ಪರಿಹಾರ ಕೂಡಾ ನೀಡದೆ ಸಾವಿನಲ್ಲೂ ಜಾತಿ-ಧರ್ಮ-ಜನಾಂಗೀಯ ತಾರತಮ್ಯ ಎಸಗಿರುವುದು ಖಂಡನೀಯ,

ಈ ಎಲ್ಲಾ ಅಹಿತಕರ ಘಟನೆ, ಹತ್ಯೆಗಳ ನಂತರ ರಾಜ್ಯದಲ್ಲಿ ಜನತೆ, ಸರಕಾರ ಮತ್ತು ಮಾಧ್ಯಮಗಳು ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವನ್ನು ಸಾಮೂಹಿಕ ವೈರಿಯ ಸ್ಥಾನದಲ್ಲಿ ನಿಲ್ಲಿಸಿ, ಅಪರಾಧಿಗಳಾಗಿ ಬಿಂಬಿಸುವಂತಹ ನೂರಾರು ಬೆಳವಣಿಗೆಗಳು ನಡೆಯುತ್ತಿರುವುದು ಅಪಾಯಕಾರಿಯಾಗಿದೆ. ಮುಸ್ಲಿಮ್ ಸಮುದಾಯ ಅಥವಾ ಇಸ್ಲಾಮ್ ಧರ್ಮ ಎಂದಿಗೂ ಅಪರಾಧ ಕೃತ್ಯ, ಮತೀಯ ದ್ವೇಷ, ಕೋಮು ವೈಷಮ್ಯ, ತಾರತಮ್ಯಗಳನ್ನು ಸಹಿಸುವುದಿಲ್ಲ. ಶಾಂತಿಯನ್ನೇ ಮೂಲ ತತ್ವವಾಗಿ ಪ್ರತಿಪಾದಿಸುತ್ತದೆ. ಈ ನಿಟ್ಟಿನಲ್ಲಿ ಜನತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ವಿನಂತಿಸುತ್ತೇವೆ.

ಸುರತ್ಕಲ್‌ ನಲ್ಲಿ ನಡೆದ ಮಂಗಳಪೇಟೆಯ ಫಾಝಿಲ್ ಹತ್ಯೆಯ ನಂತರ ಮುಸ್ಲಿಮ್ ಸಮುದಾಯ ಯಾವುದೇ ಉದ್ರೇಕಕ್ಕೆ ಒಳಗಾಗಲಿಲ್ಲ. ಬದಲಾಗಿ ಶಾಂತಿಯುತವಾಗಿ ಪ್ರತಿಕ್ರಿಯಿಸಿದೆ. ಮೃತರ ಅಂತಿಮ ಸಂಸ್ಕಾರವನ್ನು ಅತ್ಯಂತ ಶಾಂತಿಯುತವಾಗಿ ನೆರವೇರಿಸಿ, ಮುಸ್ಲಿಮ್ ಸಮುದಾಯವು ಜವಾಬ್ದಾರಿಯುತವಾಗಿ ವರ್ತಿಸಿದೆ. ಸರಕಾರ ಮೂರು ಕೊಲೆಯ ನೈಜ ಆರೋಪಿಗಳನ್ನು ಶಿಕ್ಷಿಸಬೇಕು, ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರುಪಾಯಿಗಳಿಗೆ ಕಡಿಮೆ ಇರದಂತೆ ಪರಿಹಾರ ನೀಡಬೇಕು ಎಂಬುದು ಮುಸ್ಲಿಮ್ ಸಮುದಾಯದ ಸಾಮೂಹಿಕ ಬೇಡಿಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತವು ತಾರೀಕು 30-07-2022ರಂದು ವಿವಿಧ ಧರ್ಮಗಳನ್ನು ಒಳಗೊಂಡ ಶಾಂತಿ ಸಭೆ ಏರ್ಪಡಿಸಿತ್ತು. ಮುಸ್ಲಿಮ್ ಸಮುದಾಯಕ್ಕೂ ಶಾಂತಿ ಸಭೆಗೆ ಜಿಲ್ಲಾಧಿಕಾರಿಯವರಾದ ಡಾ| ರಾಜೇಂದ್ರ ಕುಮಾರ್‌ರವರು ಆಹ್ವಾನ ನೀಡಿದ್ದರು. ಆದರೆ ಜಿಲ್ಲೆಗೆ ಆಗಮಿಸಿ, ಮೃತನ ಧರ್ಮದ ಆಧಾರದಲ್ಲಿ ಸಾಂತ್ವನ ಭೇಟಿ ನೀಡಿ, ಮಸೂದ್‌ ಮನೆಗೆ ಸಾಂತ್ವನ ಭೇಟಿ ಕೂಡಾ ನೀಡದೆ ಸಾವಿನಲ್ಲೂ ತಾರತಮ್ಯ ಎಸಗಿದ ಮುಖ್ಯಮಂತ್ರಿಯವರ ನಡೆಯನ್ನು ವಿರೋಧಿಸಿ, ಮುಸ್ಲಿಮ್ ಸಮುದಾಯವು ಶಾಂತಿ ಸಭೆಯನ್ನು ಬಹಿಷ್ಕರಿಸಿರುವುದನ್ನು ನಾವು ಸಮರ್ಥಿಸುತ್ತೇವೆ. ಈ ಬಗ್ಗೆ ವಿಷಾದವಿದೆ. ಜಿಲ್ಲಾಧಿಕಾರಿಯವರಿಗೆ ಅಗೌರವ ತೋರುವ ಯಾವುದೇ ಉದ್ದೇಶ ಮುಸ್ಲಿಮ್ ಸಮುದಾಯಕ್ಕೆ ಇರಲಿಲ್ಲ.

ಜಿಲ್ಲೆಯಲ್ಲಿ ನಡೆದ ಹತ್ಯೆಗಳು ಮತ್ತು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಂತಿ ಸ್ಥಾಪಿಸಲು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿರುವಾಗ, ಕೆಲವು ವ್ಯಕ್ತಿಗಳು ಹತ್ಯೆಯನ್ನು ಬೆಂಬಲಿಸಿ ಇನ್ನಷ್ಟು ಹತ್ಯೆಗೆ ಕರೆ ನೀಡುವ ಉದ್ರೇಕಕಾರಿ ಹೇಳಿಕೆಗಳು ಸಮಾಜದ ಶಾಂತಿಯನ್ನು ಹಾಳುಗೆಡವಿ ಕೋಮುಗಲಭೆಗೆ ಪ್ರಚೋದನೆ ನೀಡುತ್ತವೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದೇವೆ.

ರಾಜ್ಯದ ಸಚಿವರಾದ ಅಶ್ವತ್ಥ ನಾರಾಯಣ್‌ರವರು ಪ್ರವೀಣ್ ನೆಟ್ಟಾರುರವರ ಹತ್ಯೆಯ ಶಂಕಿತ’ ಆರೋಪಿ ಗಳನ್ನು ಉದ್ದೇಶಿಸಿ ‘ಎನ್‌ಕೌಂಟರ್’ಗೆ ಇದು ಸೂಕ್ತ ಸಮಯ ಎಂಬಿತ್ಯಾದಿಯಾಗಿ ಹೇಳಿಕೆ ನೀಡುವ ಮೂಲಕ ಸಂವಿಧಾನದ ಅಡಿಯಲ್ಲಿ ಕ್ರಿಯಾತ್ಮಕವಾಗಿ ಕಾರ್ಯವೆಸಗುತ್ತಿರುವ ನ್ಯಾಯಾಂಗದ ಅಸ್ತಿತ್ವವನ್ನೇ ಪ್ರಶ್ನಿಸಿರುತ್ತಾರೆ. ಈ ಬಗ್ಗೆ ಕೂಡಾ ಸರಕಾರವು ಸ್ಪಷ್ಟಿಕರಣ ನೀಡಬೇಕು. ಕೃತ್ಯದ ಅಪರಾಧಗಳನ್ನು ಪೂರ್ವ ನಿರ್ಧರಿತವಾಗಿ ಘೋಷಿಸಿ ನ್ಯಾಯಾಂಗದ ಕಾರ್ಯವನ್ನು ಸರಕಾರವೇ ಮಾಡುವುದಾದರೆ ಕಾನೂನು ಅಸ್ತಿತ್ವದಲ್ಲಿ ಇದೆಯೇ ಎಂಬ ಸಂದೇಶ ಜನತೆಗೆ ಹೋಗುವಂತಹ ಅಪಾಯಕಾರಿ ನಡೆಯು ಅತ್ಯಂತ ಕಳವಳಕಾರಿಯಾಗಿದೆ.

ಪ್ರವೀಣ್ ಕೊಲೆಯ ಹೆಸರಲ್ಲಿ ರಾಜ್ಯಾದ್ಯಂತ ಸಚಿವರುಗಳು, ಶಾಸಕರು, ಲೋಕಸಭಾ ಸದಸ್ಯರು ಅಸಂಬದ್ಧ ಮತ್ತು ಉದ್ರೇಕಕಾರಿ ಹೇಳಿಕೆಗಳನ್ನು ನೀಡಿ ಸಮಾಜವನ್ನು ಧ್ರುವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಶಾಂತಿ ಸ್ಥಾಪನೆಗೆ ಶ್ರಮಿಸಬೇಕಾದ ಹೊಣೆಗಾರರು ಪರಿಸ್ಥಿತಿಯನ್ನು ಮತ್ತಷ್ಟು ಕೆಡಿಸಲು ಪ್ರಯತ್ನಿಸುತ್ತಿರುವುದು ತೀವ್ರ ಖಂಡನೀಯ, ಅವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು.

ಪ್ರವೀಣ್ ಹತ್ಯೆಯ ಪ್ರಕರಣವನ್ನು ಎನ್.ಐ.ಎ.ಗೆ ವಹಿಸಿರುವ ರಾಜ್ಯ ಸರಕಾರ ಮಸೂದ್ ಮತ್ತು ಫಾಝಿಲ್ ಹತ್ಯೆಯನ್ನು ಕೇವಲವಾಗಿ ನೋಡುತ್ತಿರುವುದು ರಾಜ್ಯ ಸರಕಾರದ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಇದು ತೀವ್ರ ಖಂಡನೀಯ, ರಾಜ್ಯ ಸರಕಾರವು ಮೂರು ಹತ್ಯಾ ಪ್ರಕರಣಗಳನ್ನು ಒಂದೇ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಿ ನೈಜ ಅಪರಾಧಿಗಳಿಗೆ ಶಿಕ್ಷೆಯನ್ನು ಖಾತರಿ ಪಡಿಸಬೇಕು, ಯಾವುದೇ ಪ್ರಕರಣದಲ್ಲೂ ಅಮಾಯಕರಿಗೆ ತೊಂದರೆ ಆಗಬಾರದು, ನೈಜ ಅಪರಾಧಿಗಳನ್ನು ಮತ್ತು ಕೊಲೆಯ ಹಿಂದಿರುವ ಸಂಚನ್ನು ಬಯಲಿಗೆಳೆದು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇವೆ.

ಜಿಲ್ಲೆಯ ಸಾಮರಸ್ಯ-ಸಹಬಾಳ್ವೆ-ಸೌಹಾರ್ದತೆಯನ್ನು ಉಳಿಸುವುದು ಮತ್ತು ಬಲಪಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲಿ ಯಾರೂ ಯಾರಿಗೂ ಅನ್ಯರಲ್ಲ, ಪರಸ್ಪರ ಅಣ್ಣ ತಮ್ಮಂದಿರು. ನಮ್ಮ ಜಿಲ್ಲೆಯ ಶಾಂತಿಯನ್ನು ಕಾಪಾಡಲು ಸರ್ವ ಧರ್ಮಿಯ ಬಂಧುಗಳು, ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಎಲ್ಲ ಧಾರ್ಮಿಕ ಗುರುಗಳು, ಎಲ್ಲ ಧಾರ್ಮಿಕ- ಸಾಮಾಜಿಕ-ರಾಜಕೀಯ ಸಂಘಟನೆಗಳು ಗರಿಷ್ಠ ಪ್ರಯತ್ನಿಸಬೇಕೆಂದು ಅತ್ಯಂತ ಕಳಕಳಿಯಿಂದ ಕರೆ ನೀಡುತ್ತೇವೆ.

ಪತ್ರಿಕಾಗೋಷ್ಠಿಯಲ್ಲಿ ಮುತ್ತಾಝ್ ಅಲಿ (ರಾಜ್ಯ ಉಪಾಧ್ಯಕ್ಷರು, ಕರ್ನಾಟಕ ಮುಸ್ಲಿಮ್ ಜಮಾಅತ್), ಹಾಜಿ ಅಬ್ದುಲ್ ರಶೀದ್‌ (ಅಧ್ಯಕ್ಷರು, ಉಳ್ಳಾಲ ದರ್ಗಾ ಕಮಿಟಿ), ಅಶ್ರಫ್ ಕೆ.ಇ. (ಅಧ್ಯಕ್ಷರು, ಮುಸ್ಲಿಮ್ ಸಂಘಟನೆಗಳ ಒಕ್ಕೂಟ), ಯಾಕೂಬ್ ಸಅದಿ (ಎಸ್‌.ಎಸ್.ಎಫ್ ), ಸಿದ್ದೀಕ್ ಬಂಟ್ವಾಳ (ಎಸ್.ಕೆ.ಎಸ್.ಎಸ್.ಎಫ್.), ಅಶ್ರಫ್ ಕಿನಾರ (ಎಸ್.ವೈ.ಎಸ್.), ನಾಸಿರ್ ಲಕ್ಕಿ ಸ್ಟಾರ್ (ಕರ್ನಾಟಕ ಮುಸ್ಲಿಮ್ ಜಮಾಅತ್), ಮುಹಮ್ಮದ್ ಕುಂಞಿ (ಜಮಾಅತೆ ಇಸ್ಲಾಮೀ ಹಿಂದ್), ಬಶೀರ್ ಶಾಲಿಮಾರ್ (ಎಸ್.ಕೆ.ಎಸ್.ಎಂ.), ಇಜಾಝ್ ಅಹ್ಮದ್ (ಪಿ.ಎಫ್.ಐ.), ಅಶ್ರಫ್ ಬದ್ರಿಯಾ (ಮುಸ್ಲಿಮ್ ಐಕ್ಯತಾ ವೇದಿಕೆ), ಸುಹೈಲ್ ಕಂದಕ್ (ಕಾಂಗ್ರೆಸ್), ಇಖ್ಬಾಲ್ ಮುಲ್ಕಿ (ಜೆ.ಡಿ.ಎಸ್.), ಅಬೂಬಕರ್ ಕುಳಾಯಿ (ಎಸ್.ಡಿ.ಪಿ.ಐ.), ಅಡ್ವಕೇಟ್ ಸರ್ಫರಾಝ್ (ದಿ ಪಾರ್ಟಿ ಆಫ್ ಇಂಡಿಯಾ), ತಬೂಕ್ ದಾರಿಮಿ (ಮುಸ್ಲಿಮ್ ಲೀಗ್), ಇಮ್ತಿಯಾಝ್ ಬಿ.ಕೆ. (ಡಿ.ವೈ.ಎಫ್.ಐ.), ರಫೀಉದ್ದೀನ್ ಕುದ್ರೋಳಿ (ಯುನಿವೆಫ್), ಯಾಸೀನ್ ಕುದ್ರೋಳಿ (ಮುಸ್ಲಿಮ್ ಐಕ್ಯತಾ ವೇದಿಕೆ), ಮುಸ್ತಫಾ ಜನತಾ (ಅಧ್ಯಕ್ಷರು, ಸುಳ್ಯ ಜುಮಾ ಮಸ್ಜಿದ್ ), ಇಬ್ರಾಹೀಮ್ ಹಾಜಿ ಸುಳ್ಯ (ಸಂಯುಕ್ತ ಜಮಾಅತ್), ಇಖ್ಬಾಲ್ ಸುಳ್ಯ (ಸಂಯುಕ್ತ ಜಮಾಅತ್), ಹಸನಬ್ಬ ಮಂಗಳ ಪೇಟೆ (ಅಧ್ಯಕ್ಷರು, ಮಂಗಳ ಪೇಟೆ ಜುಮಾ ಮಸ್ಜಿದ್ ) ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com