janadhvani

Kannada Online News Paper

ಜೆರುಸಲೇಮ್: ಯು.ಎಸ್. ನಿರ್ಧಾರ ಕಾನೂನುಬಾಹಿರ -ಅರಬ್ ಲೀಗ್ ಶೃಂಗಸಭೆ

ರಿಯಾದ್: ಜೆರುಸಲೇಮನ್ನು ಇಸ್ರೇಲ್‌ನ ರಾಜಧಾನಿಯಾಗಿ ಗುರುತಿಸಲು ಯು.ಎಸ್. ಸರಕಾರ ಮಾಡಿದ ನಿರ್ಧಾರವು ಕಾನೂನುಬಾಹಿರ ಮತ್ತು ಅದಕ್ಕೆ ಉಳಿಗಾಲವಿಲ್ಲ ಎಂದು ಸೌದಿ ಅರೇಬಿಯಾದಲ್ಲಿ ನಡೆದ ಅರಬ್ ಲೀಗ್ ಶೃಂಗಸಭೆಯು ಹೇಳಿದೆ.

ಈ ಕುರಿತು ಅರಬ್ ದೇಶಗಳು ಪ್ರತಿಭಟನಾ ಸೂಚಕವಾಗಿ ಅರಬ್ ಶೃಂಗಸಭೆಗೆ ಖುದ್ಸ್ ಶೃಂಗಸಭೆ ಎಂದು ನಾಮಕರಣ ಮಾಡಿತ್ತು. ಅಮೇರಿಕಾ ಅಧ್ಯಕ್ಷ ಯುಎಸ್ ದೂತಾವಾಸವನ್ನು ಜೆರುಸ್ಲೇಮ್ ಗೆ ಸ್ಥಳಾಂತರ ಮಾಡುವ ಬಗ್ಗೆ ನೀಡಿದ ಪ್ರಸ್ತಾಪವು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.

ಪೂರ್ವ ಜೆರುಸಲೆಮ್, ಫೆಲಸ್ತೀನಿಯನ್ ಪ್ರದೇಶದಿಂದ ಬೇರ್ಪಡಿಸಲಾಗದ ಒಂದು ಭಾಗವಾಗಿದೆ ಎಂದು ಸಮ್ಮೇಳನದ ಸಮಾರೋಪದಲ್ಲಿ  ಸೌದಿ ಸಲ್ಮಾನ್ ರಾಜ ಘೋಷಿಸಿದರು.

ಅದೇ ವೇಳೆ, ಅರಬ್ ಶೃಂಗಸಭೆಯು ಸಿರಿಯಾದಲ್ಲಿ ಬಶರ್ ಅಲ್ ಅಸದ್ ಸೇನೆಯು ನಡೆಸಿದ ರಾಸಾಯನಿಕ ದಾಳಿಗೆ ಸಂಬಂಧಿಸಿದಂತೆ  ಯುಎಸ್ ನಡೆಸಿದ ಕ್ಷಿಪಣಿ ದಾಳಿಯ ಬಗ್ಗೆ ಯಾವುದೇ ಚರ್ಚೆಗಳನ್ನು ನಡೆಸಿಲ್ಲ.ಯುಎಸ್, ಫ್ರಾನ್ಸ್ ಮತ್ತು ಬ್ರಿಟನ್ ಜಂಟಿಯಾಗಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸಲಾಗುತ್ತದೆ ಎನ್ನಲಾದ ಮೂರು ಪ್ರಾಂತಗಳ ಮೇಲೆ ದಾಳಿ ಮಾಡಿದ ಒಂದು ದಿನದ ಬಳಿಕ  ಈ ಅರಬ್ ಶೃಂಗಸಭೆ ನಡೆಸಲಾಗಿತ್ತು.

ಸಿರಿಯಾದಲ್ಲಿ ಆಂತರಿಕ ಯುದ್ಧ ಮತ್ತು ಸಂಘರ್ಷದ ಬಗ್ಗೆ ಚರ್ಚಿಸಲಾದರೂ ಯು.ಎಸ್. ದಾಳಿಯ ಬಗ್ಗೆ ಚರ್ಚಿಸಲಾಗಲಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

ಸಿರಿಯನ್ ರಾಸಾಯನಿಕ ದಾಳಿಯನ್ನು ಶೃಂಗಸಭೆ ಟೀಕಿಸುತ್ತಿದೆ ಮತ್ತು ಅಂತಾರಾಷ್ಟ್ರೀಯ ತನಿಖೆಯನ್ನು ಒತ್ತಾಯಿಸುತ್ತಿದೆ ಎಂದು ಸೌದಿ ವಿದೇಶಾಂಗ ಸಚಿವ ಆದಿಲ್ ಅಲ್ ಜುಬೈರ್ ಅವರು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತಿಳಿಸಿದರು.
ಅರಬ್ ಶೃಂಗಸಭೆಯಲ್ಲಿ ಸಿರಿಯನ್ ಅಧ್ಯಕ್ಷ ಬಶರ್ ಅಲ್ ಅಸದ್ ಭಾಗವಹಿಸಿರಲಿಲ್ಲ.

2011 ರಲ್ಲಿ ಅರಬ್ ಶೃಂಗಸಭೆಯಿಂದ ಸಿರಿಯಾವನ್ನು ಹೊರಹಾಕಲಾಗಿತ್ತು. ಸಿರಿಯಾದಲ್ಲಿ ಯುಎಸ್ ನಡೆಸಿದ ಕ್ಷಿಪಣಿ ದಾಳಿಯ ಕುರಿತು ಶೃಂಗಸಭೆಯಲ್ಲಿ ಚರ್ಚಿಸದಿರುವುದು ವಿಚಿತ್ರವೆಂದು ವೀಕ್ಷಕರು ಹೇಳಿದ್ದಾರೆ.

ಅದೇ ರೀತಿ, ಖತರ್ ವಿರುದ್ದ ಹೇರಿದ ದಿಗ್ಬಂಧನ ಕುರಿತು ಶೃಂಗಸಭೆಯಲ್ಲಿ ಚರ್ಚಿಸಲಾಗಲಿಲ್ಲ. ಇದು ದೊಡ್ಡ ಸಮಸ್ಯೆಯಲ್ಲದ ಕಾರಣ ಅದರ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಸೌದಿ ವಿದೇಶಾಂಗ ಸಚಿವರು ಹೇಳಿದರು.ಖತರ್ ಅಮೀರ್ ಶೃಂಗಸಭೆಯಲ್ಲಿ ಭಾಗವಿಹಿಸಿರಲಿಲ್ಲ ಬದಲಾಗಿ ಅವರ ಪ್ರತಿನಿಧಿ ಭಾಗವಹಿಸಿದ್ದರು ಎನ್ನಲಾಗಿದೆ.

error: Content is protected !! Not allowed copy content from janadhvani.com