ನವದೆಹಲಿ, ಏ.17:- ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಎಟಿಎಂಗಳು ಖಾಲಿ ಖಾಲೆ ಹೊಡೆಯುತ್ತಿದ್ದು, ಎಲ್ಲೆಡೆ ನೋ ಕ್ಯಾಶ್ ನಾಮಫಲಕ ಹಾಕಲಾಗಿತ್ತು.
ಹಣವಿರುವ ಎಟಿಎಂಗಳ ಮುಂದೆ ಜನರು ಸರದಿ ಸಾಲಿನಲ್ಲಿ ಸಾಲುಗಟ್ಟಿ ನಿಂತಿದ್ದು, ತಮ್ಮ ಹಣವನ್ನು ತೆಗೆದುಕೊಳ್ಳಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದ ಮಾತ್ರವಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹೀಗೆ ಹಲವು ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಮುಂದುವರೆದಿದ್ದು, ನಾಗರಿಕರು ಎಟಿಎಂ ಮುಂದೆ ಹೋಗಿ ನೋ ಕ್ಯಾಶ್ ಹಾಗೂ ನಾಟ್ ವರ್ಕಿಂಗ್ ಬೋರ್ಡುಗಳನ್ನು ನೋಡಿ ಸಪ್ಪೆ ಮುಖ ಹಾಕಿಕೊಂಡು ವಾಪಸ್ ಬರುತ್ತಿದ್ದಾರೆ.
ದೊಡ್ಡ ದೊಡ್ಡ ಮೊತ್ತದಿರಲಿ, ಕಡಿಮೆ ಮೊತ್ತ ಡ್ರಾ ಮಾಡಿಕೊಳ್ಳಲು ಎಟಿಎಂ ಮುಂದೆ ಸಾಲುಗಟ್ಟಿ ಜನ ನಿಂತಿದ್ದಾರೆ. ಆ ಹಣವನ್ನೂ ಪಡೆಯಲಾಗದಂತ ಸ್ಥಿತಿಗೆ ತಲುಪವಾಗಿದೆ. ಬಹುತೇಕ ಎಟಿಎಂಗಳು ನೋ ಕ್ಯಾಶ್ ಬೋರ್ಡ್ ಕಾಣುತ್ತಿದ್ದು, ಕೆಲ ಎಟಿಎಂಗಳಲ್ಲಿ ಹಣ ತುಂಬಿದ ಕೆಲವೇ ನಿಮಿಷಗಳಲ್ಲಿ ಹಣ ಖಾಲಿಯಾಗುತ್ತಿದೆ.
ಹೀಗಾಗಿ, ಎಟಿಎಂಗಳ ಮುಂದೆ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಸಾರ್ವಜನಿಕರ ಆಕ್ರೋಶ: ದೇಶದ ವಿವಿಧ ರಾಜ್ಯಗಳಲ್ಲಿ ಎಟಿಎಂಗಳು ಖಾಲಿ ಖಾಲಿ ಹೊಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಟಿಎಂ ಮುಂದೆ ಹಾಕಲಾಗಿರುವ ನೋ ಕ್ಯಾಶ್ ಹಾಗೂ ನಾಟ್ ವರ್ಕಿಂಗ್ ಬೋರ್ಡುಗಳ ಫೋಟೊ ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.