janadhvani

Kannada Online News Paper

ಪ್ರವಾದಿ ವಿರುದ್ಧ ಹೇಳಿಕೆ: ನೂಪುರ್ ಶರ್ಮಾ ಇಡೀ ದೇಶದ ಕ್ಷಮೆ ಯಾಚಿಸಬೇಕು- ಸುಪ್ರೀಂಕೋರ್ಟ್

ದೇಶದಲ್ಲಿ ಏನಾಗುತ್ತಿದೆಯೇ ಅದಕ್ಕೆಲ್ಲಾ ಅವರೊಬ್ಬರೇ ಹೊಣೆಯಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ

ನವದೆಹಲಿ:ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ನೀಡಿರುವ ಹೇಳಿಕೆ ದೇಶಾದ್ಯಂತ ತೀವ್ರ ವಿವಾದಕ್ಕೆಡೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಟೆಲಿವಿಷನ್ ಮೂಲಕ ನೂಪುರ್ ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಶುಕ್ರವಾರ (ಜುಲೈ 01) ತಿಳಿಸಿದೆ.

ದೇಶದಲ್ಲಿ ಏನಾಗುತ್ತಿದೆಯೇ ಅದಕ್ಕೆಲ್ಲಾ ಅವರೊಬ್ಬರೇ ಹೊಣೆಯಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ.

“ಆಕೆ ಹೇಗೆ ಪ್ರಚೋದಿಸಿದ್ದಾರೆ ಎಂದು ತಿಳಿಯಲು ನಾವು ಟಿವಿ ಚರ್ಚೆಯನ್ನು ನೋಡಿದ್ದೇವೆ. ಆದರೆ ಆಕೆ ಇದನ್ನೆಲ್ಲ ಹೇಳಿದ ರೀತಿ ಹಾಗೂ ನಂತರ ಆಕೆ ತಾನು ವಕೀಲೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆಕೆ ಇಡೀ ದೇಶದ ಕ್ಷಮೆಯಾಚಿಸಬೇಕು’ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಪ್ರವಾದಿ ಪೈಗಂಬರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್ ಐಆರ್ ಗಳನ್ನು ತನಿಖೆಗಾಗಿ ದೆಹಲಿಗೆ ವರ್ಗಾಯಿಸಬೇಕೆಂದು ಕೋರಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಿಮ್ಮ (ನೂಪುರ್) ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆ ಬಂದಿದೆ ಎಂದು ಹೇಳಿದ್ದು, ಆಕೆಯ ಮನವಿಯನ್ನು ವಜಾಗೊಳಿಸಿ, ಯಾವುದೇ ಪರಿಹಾರ ಬೇಕಿದ್ದರು ಹೈಕೋರ್ಟ್ ಮೆಟ್ಟಿಲೇರುವಂತೆ ಸೂಚಿಸಿ, ಸುಪ್ರೀಂಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಅರ್ಜಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಲ್ಲಿಸಿ, ಹಾಜರಾಗಲು ಯೋಗ್ಯವಾಗಿಲ್ಲ ಎಂದು ಆಕೆ ಭಾವಿಸಿದಂತಿದೆ ಎಂದು ಸುಪ್ರೀಂಕೋರ್ಟ್ ಪೀಠ ಅಭಿಪ್ರಾಯವ್ಯಕ್ತಪಡಿಸಿದೆ. ಪಕ್ಷದ ವಕ್ತಾರರಾದವರು ಇಂತಹ ಹೇಳಿಕೆಗಳನ್ನು ನೀಡಬಾರದು. ಕೆಲವೊಮ್ಮೆ ಅಧಿಕಾರ ಎನ್ನುವುದು ಜನರ ತಲೆಗೆ ಏರುತ್ತದೆ. ಇದರಿಂದ ತಾವೇ ಸರ್ವಸ್ವ ಎಂದು ಭಾವಿಸುತ್ತಾರೆ. ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡಿದ ನೂಪುರ್ ವಿರುದ್ಧ ಪ್ರಕರಣ ಯಾಕೆ ದಾಖಲಿಸಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ನೂಪುರ್ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಕೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. “ನೂಪರ್ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆಯೇ ಅಥವಾ ಆಕೆ ಭದ್ರತೆಗೆ ಬೆದರಿಕೆಯಾಗಿದ್ದಾರೆಯೇ? ದೇಶದಾದ್ಯಂತ ಭಾವನೆಗಳಿಗೆ ಕಿಡಿ ಹೊತ್ತಿಸಿದ ರೀತಿ, ದೇಶದಲ್ಲಿ ನಡೆಯುತ್ತಿರುವ ಘಟನೆಗೆ ಆಕೆಯೇ ಹೊಣೆಯಾಗಿದ್ದಾರೆ”ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

ಆಕೆಯ ಹೇಳಿಕೆಗಳು ಆಕೆಯ “ಹಠಮಾರಿತನ ಹಾಗೂ ಸೊಕ್ಕಿನ ಸ್ವಭಾವ”ವನ್ನು ತೋರಿಸುತ್ತವೆ. ಪಕ್ಷದ ವಕ್ತಾರೆ ಎಂಬ ನೆಲೆಯಲ್ಲಿ ತನಗೆ ಅಧಿಕಾರವಿದೆ, ನೆಲದ ಕಾನೂನಿಗೆ ಗೌರವವಿಲ್ಲದೆ ಯಾವುದೇ ಹೇಳಿಕೆ ನೀಡಬಹುದು ಎಂದು ಆಕೆ ಭಾವಿಸಿದ್ದಾರೆ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.

error: Content is protected !! Not allowed copy content from janadhvani.com